ಬೆಂಗಳೂರು, ಜು 27 (DaijiworldNews/MS): ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ , ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದ ಪ್ರವೀಣ್( ೩೦) ಅವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿರುವುದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡುರಾವ್ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ,ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು ಇದೇ ವಿಚಾರದ ಕುರಿತು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಟ್ವೀಟ್ ಮಾಡಿದ್ದು " ದ.ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಎಂಬ ಯುವಕನ ಕೊಲೆ ಅತ್ಯಂತ ಹೇಯ ಕೃತ್ಯ. ಕೆಲ ದಿನಗಳ ಹಿಂದೆ ಸುಳ್ಯದಲ್ಲಿ ಅನ್ಯ ಧರ್ಮದ ಯುವಕನ ಕೊಲೆಯಾಗಿತ್ತು.ಆ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ನಡೆದ ಶಂಕೆಯಿದೆ. ಇದು ಖಂಡನೀಯ. ಕೊಲೆಗೆ ಕೊಲೆ ಪ್ರತಿಕಾರವಲ್ಲ. ಸರ್ಕಾರ ಹತ್ಯೆ ನಡೆಸಿದ ದುಷ್ಕರ್ಮಿಗಳ ಮಟ್ಟ ಹಾಕಲಿ " ಎಂದು ಬರೆದುಕೊಂಡಿದ್ದಾರೆ.