ಹೈದರಾಬಾದ್, ಜು 27 (DaijiworldNews/DB): ಹೈದರಾಬಾದ್ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕನ ಪುತ್ರ ಸೇರಿದಂತೆ ನಾಲ್ವರು ಅಪ್ರಾಪ್ತರಿಗೆ ಜಾಮೀನು ಮಂಜೂರಾಗಿದೆ. ಐದನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಮ್ ಜುವೆನೈಲ್ ಜಸ್ಟೀಸ್ ಬೋರ್ಡ್ ಜಾಮೀನು ಮಂಜೂರುಗೊಳಿಸಿ ಮಂಗಳವಾರ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಬಾಲಾಪರಾಧಿಗೃಹದಲ್ಲಿದ್ದ ನಾಲ್ವರಿಗೆ ಜಾಮೀನು ಮಂಜೂರಾಗಿದ್ದು, ಐದನೇ ಅಪ್ರಾಪ್ತ ಆರೋಪಿಯು ಜಾಮೀನಿಗಾಗಿ ತೆಲಂಗಾಣ ಹೈಕೋರ್ಟ್ಗೆ ಮೊರೆ ಹೋಗಿದ್ದಾನೆ. ಸದ್ಯ ಆತ ಬಾಲಾಪರಾಧಿಗೃಹದಲ್ಲೇ ಇದ್ದಾನೆ. ಇನ್ನು ವಯಸ್ಕ ಆರೋಪಿ ಸಾದುದ್ದೀನ್ ಮಲ್ಲಿಕ್ ಎಂಬಾತನನ್ನು ಚಂಚಲಗುಡ ಜೈಲಿನಲ್ಲಿ ಇರಿಸಲಾಗಿದೆ.
ಕಳೆದ ಮೇ 28ರಂದು 17 ವರ್ಷದ ಅಪ್ರಾಪ್ತೆ ಪಾರ್ಟಿಗೆ ಪಬ್ಗೆ ಹೋಗಿದ್ದ ವೇಳೆ ಆಕೆಯನ್ನು ಭೇಟಿಯಾದ ಅಪ್ರಾಪ್ತರು ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ರಸ್ತೆ ನಂಬರ್ 44ರಲ್ಲಿರುವ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಘಟನೆ ನಡೆದು ಒಂದು ವಾರದ ಬಳಿಕ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅತ್ಯಾಚಾರ ಎಸಗಲು ಬಳಸಿದ್ದ ಕಾರು ಶಾಸಕರೊಬ್ಬರಿಗೆ ಸೇರಿದ್ದೆಂದು ತಿಳಿದು ಬಂದಿತ್ತು.