ಬೆಂಗಳೂರು, ಜು 26 (DaijiworldNews/DB): ಕಾಂಗ್ರೆಸ್ ಪಕ್ಷದಲ್ಲಿ ಈಗ ಕುರ್ಚಿ ಕಲಹ ಪರ್ವ ಆರಂಭಗೊಂಡಿದೆ. ಒಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ಹಿಡಿದು ಮಾರಾಮಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕರು, ಎಲ್ಲೆಂದರಲ್ಲಿ, ಸಿಎಂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಚಿಕ್ಕಮಗಳೂರು ಚಿತ್ರದುರ್ಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿಯಲ್ಲಿ ಬಡಿದಾಡಿಕೊಂಡ ಘಟನೆ ಹಾಗೂ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಗುದ್ದಾಟದ ಕುರಿತು ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಬಿಜೆಪಿ, ದಶಕಗಳಿಂದ ಜನರಿಗೆ ಮಂಕು ಬೂದಿ ಎರಚಿಕೊಂಡೇ ಬಂದಿರುವ ಕಾಂಗ್ರೆಸ್ ನಾಯಕರು ಈಗ ತಮ್ಮೊಳಗೆ ಸಿಎಂ ಕುರ್ಚಿಯ ಆಕಾಂಕ್ಷಿಗಳಿಗೆ ಮಂಕುಬೂದಿ ಎರಚಲು ಯತ್ನಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯ ಕುರ್ಚಿ ಭಾಗ್ಯವೂ ಕಾಂಗ್ರೆಸ್ಸಿಗರಿಗೆ ದಕ್ಕದು ಎಂದು ಲೇವಡಿ ಮಾಡಿದೆ.
ಕಾಣದ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರ ಮನ ಹಂಬಲಿಸುತ್ತಿದೆ. ಉತ್ಸವ, ವ್ಯಕ್ತಿಯಾರಾಧನೆ, ನಕಲಿ ಗಾಂಧಿ ಕುಟುಂಬದ ಋಣ ಸಂದಾಯದ ಮುಖೇನ ಸಿಎಂ ಕುರ್ಚಿಗೆ ಟವೆಲ್ ಹಾಕಿ ಕಾಯ್ದಿರಿಸುವ ಪ್ರಯತ್ನದಲ್ಲಿದ್ದಾರೆ. ನಾಲ್ಕು ಕಾಲಿನ ಸಿಎಂ ಕುರ್ಚಿಗೆ ಕಾಂಗ್ರೆಸ್ ಪಕ್ಷದ ಅಷ್ಟ ದಿಕ್ಕುಗಳಿಂದ ದಾಳಿಯಾಗುತ್ತಿದೆ! ಎಂದು ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
ಖಾಲಿ ಇರದ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ಕದನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಭೆ ಸಮಾರಂಭಗಳ ಕುರ್ಚಿಗಳಷ್ಟೆ ಖಾಲಿ ಬಿದ್ದಿವೆ. ಕಾಂಗ್ರೆಸ್ಸಿಗರೇ, ನಿಮ್ಮೊಳಗಿನ ಖಾಲಿ ಕುರ್ಚಿಗಳನ್ನು ಮೊದಲು ಭರ್ತಿ ಮಾಡಿಕೊಳ್ಳಿ ಎಂದು ಇದೇ ವೇಳೆ ಬಿಜೆಪಿ ಸಲಹೆ ನೀಡಿದೆ.