ನವದೆಹಲಿ, ಜು 26 (DaijiworldNews/DB): ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರವು ವಿಪಕ್ಷಗಳ ನಾಯಕರ ಮೇಲೆ ದ್ವೇಷ ಸಾಧಿಸುತ್ತಿದೆ. ಈ ವಿಚಾರದಲ್ಲಿ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ ಹಲವು ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಯಾವುದೇ ಸಮರ್ಥನೆಗಳಿಲ್ಲದೆ ಅನಿಯಂತ್ರಿತವಾಗಿ ವಿಪಕ್ಷ ನಾಯಕಗಳ ವಿರುದ್ದ ಕಾನೂನನ್ನು ಜಾರಿಗೊಳಿಸುವ ಪ್ರಯತ್ನ ಕೇಂದ್ರದಿಂದ ಆಗುತ್ತಿದೆ. ವ್ಯಕ್ತಿಯ ಖ್ಯಾತಿ ನಾಶಪಡಿಸುವ ಏಕೈಕ ಗುರಿಯೊಂದಿಗೆ ಕೇಂದ್ರವು ಸೇಡಿನ ಅಭಿಯಾನ ನಡೆಸುತ್ತಿದೆ. ಬಿಜೆಪಿ ವಿರುದ್ದ ಸೈದ್ದಾಂತಿಕ ಮತ್ತು ರಾಜಕೀಯವಾಗಿ ಹೋರಾಡುವ ವಿಪಕ್ಷಗಳ ಶಕ್ತಿಯನ್ನು ದುರ್ಬಲಗೊಳಿಸುವ ದುರುದ್ದೇಶ ಕೇಂದ್ರದ್ದು. ಇದೆಲ್ಲವನ್ನು ಪರಿಹರಿಸಲು ತಮ್ಮ ಮಧ್ಯ ಪ್ರವೇಶ ಅಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಆರ್ಜೆಡಿ ಮತ್ತು ಸಿಪಿಐ(ಎಂ) ಪಕ್ಷಗಳ ನಾಯಕರು ಪತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಬೆಲೆ ಏರಿಕೆ ಮತ್ತು ಜಿಎಸ್ಟಿ ಹೆಚ್ಚಳದ ಕುರಿತು ತುರ್ತು ಚರ್ಚೆಗೆ ಮುಂಗಾರು ಅಧಿವೇಶನದ ಕಲಾಪಗಳ ಲ್ಲಿ ಅವಕಾಶ ನೀಡದೇ ಸರ್ಕಾರ ಹಠಮಾರಿ ಧೋರಣೆ ತಾಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಏರಿಕೆಯಾಗುತ್ತಿರುವ ನಿರುದ್ಯೋಗ, ಜೀವನೋಪಾಯದ ನಷ್ಟ, ಜೀವನ ಅಭದ್ರತೆ, ಸ್ವಾತಂತ್ರ್ಯ ಮತ್ತು ಆಸ್ತಿಯ ಅಭದ್ರತೆ ಸೇರಿದಂತೆ ದೇಶದ ಜನರನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಂದ ಜನರ ಗಮನ ಬವೇರೆಡೆ ಸೆಳೆಯಲು ಇದನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.