ನವದೆಹಲಿ, ಜು 26 (DaijiworldNews/DB): ಫೋನ್ ಟ್ಯಾಪ್ ಮಾಡಲಾಗಿದೆ ಎಂಬ ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಹೇಳಿಕೆ ಬಾಲಿಶವಾಗಿದೆ. ಬಿಜೆಪಿ ಗೆಲುವು ಖಚಿತ ಎಂಬುದು ಎಲ್ಲರಿಗೂ ಗೊತ್ತಿದ್ದ ಮೇಲೆ ಅವರ ಫೋನ್ ಟ್ಯಾಪ್ ಮಾಡುವ ಅಗತ್ಯತೆ ಯಾರಿಗೂ ಬರುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನನ್ನ ಫೋನ್ ಟ್ಯಾಫ್ ಆಗಿದೆ ಎಂಬುದಾಗಿ ಮಾರ್ಗರೇಟ್ ಆಳ್ವ ಟ್ವೀಟರ್ನಲ್ಲಿ ಬರೆದುಕೊಂಡ ಕುರಿತು ಪ್ರತಿಕ್ರಿಯೆ ನೀಡಿರುವ ಜೋಶಿ, ಅವರ ಫೋನ್ ಟ್ಯಾಪ್ ಮಾಡುವಂತಹ ಕೀಳು ಮಟ್ಟದ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾಗಿದ್ದು, ಬಾಲಿಶವಾದ ಹೇಳಿಕೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಉಪ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಏನೆಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಇದರಲ್ಲಿ ಗೆಲುವು ಖಚಿತ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಮಾರ್ಗರೇಟ್ ಆಳ್ವ ಅವರು ಹಿರಿಯ ನಾಯಕಿ. ಇಂತಹ ಹೇಳಿಕೆ ನೀಡುವ ಮೊದಲು ಅವರು ಆಲೋಚಿಸಬೇಕು. ಹುರುಳಿಲ್ಲದ, ಆಧಾರರಹಿತ ಆರೋಪ ಅವರಿಗೆ ಶೋಭೆ ತರುವಂತದಲ್ಲ ಎಂದು ತಿಳಿಸಿದರು.
ಆಗಸ್ಟ್ 6ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಸ್ಪರ್ಧಿಸುತ್ತಿದ್ದಾರೆ.