ಲಖಿಂಪುರ,ಜು 26 (DaijiworldNews/HR): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ತಿರಸ್ಕರಿಸಿದೆ.
ಕಳೆದ ವರ್ಷ ಅಕ್ಟೋಬರ್ 3 ರಂದು ಯುಪಿಯ ಲಖಿಂಪುರ ಖೇರಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಅವರನ್ನು ಅಕ್ಟೋಬರ್ 9 ರಂದು ಬಂಧಿಸಲಾಯಿತು.
ಇನ್ನು ಅಕ್ಟೋಬರ್ 3ರಂದು ಲಖಿಂಪುರ ಖೇರಿಗೆ ಬಿಜೆಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಕೊಟ್ಟಿದ್ದು, ಈ ವೇಳೆ ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದಿತ್ತು. ಈ ಘಟನೆ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದ್ದು, ಇದರಲ್ಲಿ ಪತ್ರಕರ್ತನೊಬ್ಬ, ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು.