ಬೆಂಗಳೂರು, ಜು 26 (DaijiworldNews/DB): ಈ ದೇಶಕ್ಕಾಗಿ ಗುಲಾಮರಂತೆ ಕೆಲಸ ಮಾಡಿದ ಗಾಂಧಿ ಕುಟುಂಬಕ್ಕೆ ನಾವೂ ಗುಲಾಮರಂತೆ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗಾಂಧಿ ಕುಟುಂಬದ ಗುಲಾಮರಂತೆ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುತ್ತಿದ್ದಾರೆಂಬ ಬಿಜೆಪಿಗರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಗಾಂಧಿ ಕುಟುಂಬ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಕೂಡ ಅನುಭವಿಸಿದೆ. ಆದರೆ ಈ ಹೋರಾಟದಲ್ಲಿ ಬಿಜೆಪಿಯವರು ಪಾಲ್ಗೊಂಡಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಗಾಂಧಿ ಕುಟುಂಬಕ್ಕಾಗಿ ನಾವೆಲ್ಲರು ಟೊಂಕ ಕಟ್ಟಿ ನಿಲ್ಲುತ್ತೇವೆ ಎಂದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಮ್ಮ ತಾಯಿಯಂತೆ. ರಾಹುಲ್ ಗಾಂಧಿ ನಮ್ಮ ಸಹೋದರನಂತೆ. ಸೇಡಿನ ರಾಜಕೀಯದ ಭಾಗವಾಗಿ ನನ್ನನ್ನು, ನಾನು, ಚಿದಂಬರಂ ಮತ್ತಿತರ ನಾಯಕರನ್ನು ಜೈಲಿಗೆ ಕಳುಹಿಸಲಾಗಿದೆ. ಪ್ರಸ್ತುತ ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ದ ಅವರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ವಿರೋಧ ಪಕ್ಷದ ನಾಯಕರ ವಿರುದ್ಧ ಯಾಕೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ? ಬಿಜೆಪಿ ನಾಯಕರ ಮೇಲೆ ಯಾಕೆ ತನಿಖೆಗೆ ಮುಂದಾಗುತ್ತಿಲ್ಲ ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.