ಬೆಂಗಳೂರು, ಜು 26 (DaijiworldNews/DB): ಕಾಂಗ್ರೆಸ್ನವರು ವ್ಯಕ್ತಿ ಉತ್ಸವ ಮಾಡಿದರೆ, ನಾವು ಜನೋತ್ಸವ ಮಾಡುತ್ತೇವೆ. ಬೊಮ್ಮಾಯಿ ಸರ್ಕಾರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28ರಂದು ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 28ರಿಂದ 30ರವರೆಗೆ ಜನೋತ್ಸವ ಜರಗಲಿದೆ. 28ರಂದು ದೊಡ್ಡಬಳ್ಳಾಪುರದಲ್ಲಿ, 29 ಹಾಗೂ 30ರಂದು ಆಯಾ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜನರನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುವುದೇ ಜನೋತ್ಸವದ ಉದ್ದೇಶ. ಆದರೆ ಕಾಂಗ್ರೆಸ್ ಸಿದ್ದರಾಮಯ್ಯ ಉತ್ಸವ ಮಾಡಿ ವ್ಯಕ್ತಿ ಪೂಜೆ ಮಾಡುವುದರಲ್ಲಿ ನಿರತವಾಗಿದೆ ಎಂದು ಟೀಕಿಸಿದರು.
ಜಮೀರ್ ಅಹ್ಮದ್ ಖಾನ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುನಿಲ್ಕುಮಾರ್, ಸಿದ್ದರಾಮಯ್ಯ ಹೇಳುವ ಮಾತನ್ನು ಅವರು ಜಮೀರ್ ಮೂಲಕ ಹೇಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ನೊಟೀಸ್ ನೀಡಿರುವುದು ಸಿದ್ದರಾಮಯ್ಯಗೇ ಹೊರತು ಜಮೀರ್ಗಲ್ಲ. ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಬೆಳಕು ಯೋಜನೆಯಡಿ ವಿದ್ಯುತ್ರಹಿತ ಮನೆಗಳಿಗೆ ವಿದ್ಯುತ್ ಕಲ್ಪಿಸಿಕೊಡುವ ಪ್ರಯತ್ನ ನಡೆಯುತ್ತಿದೆ. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡುವುದಿಲ್ಲ ಎಂಬುದಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ನಿಯಮವನ್ನು ನಾವು ಕೈಬಿಟ್ಟಿದ್ದೇವೆ. ಹೊಸದಾಗಿ 1,500 ಕಿ.ಮೀ ವಿದ್ಯುತ್ ಕೇಬಲ್ ಎಳೆಯಲಾಗಿದ್ದು, 200 ಕಡೆ ಸಬ್ ಸ್ಟೇಷನ್ ಉನ್ನತೀಕರಣ ವ್ಯವಸ್ಥೆಗೊಳಿಸಲಾಗಿದೆ ಎಂದರು.