ಬೆಂಗಳೂರು, ಜು 26 (DaijiworldNews/DB): ತಾನು ಕೊಟ್ಟ ನೋಟಿಸ್ಗೆ ತಾನೇ ಬೆಲೆ ನೀಡಲಾಗದ ಸ್ಥಿತಿಗೆ ಡಿ.ಕೆ. ಶಿವಕುಮಾರ್ ತಲುಪಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಹೈಕಮಾಂಡ್ ನೀಡಿರುವ ನೋಟೀಸ್ ಕುರಿತು ಸರಣಿ ಟ್ವೀಟ್ ಮಾಡಿ ಲೇವಡಿ ಮಾಡಿರುವ ಬಿಜೆಪಿ ರಾಜ್ಯ ಘಟಕ, ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ಎಚ್ಚರಿಕೆ ಡಿಕೆಶಿಯ ಅಸಹಾಯಕತೆಗೆ ಹಿಡಿದ ಕನ್ನಡಿ. ತನ್ನ ಮಾತು ಕೇಳುವುದಿಲ್ಲ ಎಂದು ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲು ಹೈಕಮಾಂಡ್ ಮೊರೆ ಹೋಗುವಂತಾಯ್ತು. ಇದು ಅಸಹಾಯಕತೆ ಅಲ್ಲದೆ ಮತ್ತೇನು? ಎಂದು ಲೇವಡಿ ಮಾಡಿದೆ.
ಡಿ.ಕೆ. ಶಿವಕುಮಾರ್ ವಿರುದ್ಧದ ಪಿಸುಮಾತು ಪ್ರಕರಣಕ್ಕಾಗಿ ಉಗ್ರಪ್ಪ ಅವರಿಗೆ ಈ ಹಿಂದೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅದೇ ಉಗ್ರಪ್ಪ ಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ವಿರಾಜಮಾನರಾದರು, ಡಿಕೆ ಶಿವಕುಮಾರ್ ಜತೆ ಪತ್ರಿಕಾಗೋಷ್ಠಿ ನಡೆಸಿದರು ಎಂದು ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ ಶಿಸ್ತು ಸಮಿತಿ ಎಂದರೆ ರಾಜಕೀಯ ಜವಾಬ್ದಾರಿ ಇಲ್ಲದವರಿಗೆ ನೀಡುವ ತಾತ್ಕಾಲಿಕ ಕಚೇರಿಯಾಗಿದೆ. ಶಿಸ್ತು ಸಮಿತಿಯ ನೋಟಿಸ್ ಕತೆ ಬಿಡಿ, ಹೈಕಮಾಂಡ್ ನಿರ್ದೇಶನವನ್ನೇ ಗಾಳಿಗೆ ತೂರಲಾಗುತ್ತಿದೆ. ನಾಯಕತ್ವ ಎನ್ನುವುದು ಗಾಳಿ ಬಂದತ್ತ ತೂರುವಂತಾದರೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.
ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿದ್ದಕ್ಕಾಗಿ ಸಿದ್ದರಾಮಯ್ಯ ಬಣದ ವ್ಯಕ್ತಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ನೀಡುವ ನೋಟಿಸ್ ಈಗ ನಗೆಪಾಟಲಿಯ ಸರಕಾಗಿದೆ. ನೋಟಿಸ್ ನೀಡಿದ ಮರುದಿನವೇ ಮತ್ತೆ ಟೀಕೆ ಶುರುವಾಗುತ್ತದೆ. ಡಿಕೆಶಿ ಅವರ ಅಸಹಾಯಕ ಸ್ಥಿತಿಗೆ ಮರುಕಪಡುವಂತಾಗಿದೆ ಎಂದು ಬಿಜೆಪಿ ಟೀಕಿಸಿದೆ.