ಮಹಾರಾಷ್ಟ್ರ, ಜು 26 (DaijiworldNews/DB): ಶಿಂಧೆ ಬಣ ನನಗೆ ದ್ರೋಹ ಮಾಡಿದ್ದಾರೆ. ಮತಕ್ಕಾಗಿ ತನ್ನ ತಂದೆಯ ಹೆಸರನ್ನು ಅವರು ಬಳಸಿಕೊಳ್ಳಬಾರದು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಾಲಿ ಮುಖ್ಯಮಂತ್ರಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಪಕ್ಷದ ಮುಖವಾಣಿ 'ಸಾಮ್ನಾ'ಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಆಸ್ಪತ್ರೆಯಲ್ಲಿದ್ದಾಗ ಶಿಂಧೆ ಬಣ ನನ್ನ ವಿರುದ್ದ ದಂಗೆ ಯೋಜಿಸಿತ್ತು. ನಾನು ಅವರನ್ನು ಸಿಎಂ ಮಾಡುವ ಭರವಸೆ ನೀಡಿದರೂ ಅವರದ್ದು ಪೈಶಾಚಿಕ ಮಹತ್ವಾಕಾಂಕ್ಷೆಗಳಾಗಿದ್ದವು ಎಂದರು.
ಶಿಂಧೆ ಬಣದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ದವ್ ಠಾಕ್ರೆ, ತಮ್ಮ ಬೇಡಿಕೆಗಳಿಗೆ 2019ರಲ್ಲೇ ಬಿಜೆಪಿ ಅಸ್ತು ಎಂದಿದ್ದರೆ ಅವರಿಗೆ ಗೌರವ ಸಿಗುತ್ತಿತ್ತು. ಆದರೆ ಅವರದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೆಲವರು ಹಿಂದೂಗಳ ನಡುವಿನ ಏಕತೆ ಒಡೆಯಲು, ಶಿವಸೇನೆಯನ್ನು ಮುಗಿಸಲು ಬಯಸುತ್ತಾರೆ. ಹಿಂದುತ್ವದಲ್ಲಿ ಇನ್ನೊಬ್ಬ ಪಾಲುದಾರ ಇರುವುದು ಅವರಿಗೆ ಇಷ್ಟವಿಲ್ಲ. ಠಾಕ್ರೆಗಳನ್ನು ಶಿವಸೇನೆಯಿಂದ ಬೇರ್ಪಡಿಸುವುದೇ ಅವರ ಉದ್ದೇಶ ಎಂದು ಕಿಡಿ ಕಾರಿದರು.