ಕೋಲ್ಕತ್ತ, ಜು 26 (DaijiworldNews/DB): ಬಂಗಾಳವನ್ನು ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅದಕ್ಕೂ ಮೊದಲು ಬಂಗಾಳಕೊಲ್ಲಿಯನ್ನು ಅವರು ದಾಟಬೇಕಿದೆ. ಅಲ್ಲಿರುವ ಮೊಸಳೆಗಳು ಅವರನ್ನು ಕಚ್ಚಿ ಹಾಕುತ್ತವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಜಾರಿ ನಿರ್ದೇಶನಾಲಯವು ತಮ್ಮ ಸಂಪುಟ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ದ ಕಿಡಿ ಕಾರಿರುವ ಅವರು, ಬಂಧಿತ ಸಚಿವನನ್ನು ಬಿಜೆಪಿ ಹಿಡಿತದಲ್ಲಿರುವ ಭುವನೇಶ್ವರದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಹೋರುವುದರ ಹಿಂದಿನ ಉದ್ದೇಶವೇನು? ಇದು ಬಂಗಾಳದ ಜನತೆಗೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರ ಅಮಾಯಕ, ರಾಜ್ಯಗಳೆಲ್ಲ ಕಳ್ಳರು ಎಂದು ಬಿಜೆಪಿ ತಿಳಿದುಕೊಂಡಿದೆ. ಆದರೆ ರಾಜ್ಯಗಳಿರುವುದರಿಂದಲೇ ಕೇಂದ್ರದಲ್ಲಿ ಅವರು ಇರುವುದು. ಮಹಾರಾಷ್ಟ್ರಕ್ಕೆ ಹೋರಾಡಲು ಆಗಲಿಲ್ಲ. ಮಹಾರಾಷ್ಟ್ರದ ಬಳಿಕ ಛತ್ತೀಸ್ಘಡ, ಜಾರ್ಖಂಡ್, ಬಂಗಾಳ ಎಂದು ಅವರು ಹೇಳಿದ್ದಾರೆ. ಆದರೆ ಬಂಗಾಳಕ್ಕೆ ಬರುವ ಮುನ್ನ ಬಂಗಾಳಕೊಲ್ಲಿ ದಾಟುವಾಗ ಅಲ್ಲಿನ ಮೊಸಳೆಗಳು ಕಚ್ಚದೇ ಬಿಡುವುದಿಲ್ಲ. ಉತ್ತರ ಬಂಗಾಳದಲ್ಲಿರುವ ಆನೆಗಳು ನಿಮ್ಮ ಮೇಲೆ ಉರುಳುವುದು ನಿಶ್ಚಿತ ಎಂದರು.
ಭ್ರಷ್ಟಾಚಾರ, ತಪ್ಪುಗಳಿಗೆ ನಾನೆಂದೂ ಬೆಂಬಲಿಸುವುದಿಲ್ಲ. ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ನನ್ನ ಪಕ್ಷವನ್ನು ಒಡೆಯಲು ಬಿಜೆಪಿಗರಿಂದ ಸಾಧ್ಯವಿಲ್ಲ. ಕಳ್ಳ, ಡಕಾಯಿತನಾಗಿದ್ದರೆ ಯಾರನ್ನೂ ಟಿಎಂಸಿ ಬಿಡುವುದಿಲ್ಲ. ನನ್ನದೇ ಜನರನ್ನೂ ಈ ವಿಚಾರದಲ್ಲಿ ಬಂಧಿಸಿದ್ದೇನೆ. ಆದರೆ ನನ್ನ ಮೇಲೆ ಶಾಯಿ ಎಸೆಯಲು ನೀವು ನೋಡಿದರೆ ಕೆಸರು ಎರಚುವುದು ನನಗೆ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.