ಬೆಂಗಳೂರು, ಜು 25 (DaijiworldNews/SM): ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಪಿಎಸ್ ಐ ನೇಮಕಾತಿ ಹಗರಣದಿಂದಾಗಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ.
ಜಾಮೀನು ಕೋರಿ ಅಮೃತ್ ಪೌಲ್ ಅವರ ಪರವಾದ ವಕೀಲರು ಅರ್ಜಿ ಸಲ್ಲಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಯನ್ನು ಒಂದನೇಯ ಎಸಿಎಂಎಂ ಕೋರ್ಟ್ ವಜಾಗೊಳಿಸಿದೆ. ಪಿಎಸ್ ಐ ಹಗರಣದಲ್ಲಿ ಆರೋಪಿಯಾಗಿರುವ ಅಮೃತ್ಪೌಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಜು.20ರಂದು ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿದೆ. ಸೋಮವಾರ ಅರ್ಜಿ ವಜಾಗೊಳಿಸಿರುವ ಆದೇಶವನ್ನು ಪ್ರಕಟಿಸಿದೆ.
ಅಮೃತ್ ಪೌಲ್ರನ್ನು ಜು.4ರಂದು ಬಂಧಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಜು.15ರಂದು ಪೌಲ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸಿಐಡಿ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್ ಅವರು, ಪಿಎಸ್ ಐ ಹಗರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಈ ಹಂತದಲ್ಲೇ ಆರೋಪಿ ಪೌಲ್ ಅವರಿಗೆ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತ್ಯೆಯಿದೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕೆಂದು ಕಳೆದ ವಿಚಾರಣೆ ವೇಳೆ ಪೀಠಕ್ಕೆ ಮನವಿ ಮಾಡಿದ್ದರು.