ನವದೆಹಲಿ, ಜು 25 (DaijiworldNews/SM): ದೇಶದ 15ನೇ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅನುಗುಣವಾಗಿ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಪಕ್ಷ ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ದೂರಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಷ್ಟ್ರಪತಿಗಳ ಪದಗ್ರಹಣ ಸಮಾರಂಭದಲ್ಲಿ ಅವರ ಸ್ಥಾನಕ್ಕೆ ಅನುಗುಣವಾದ ಜಾಗವನ್ನು ನೀಡಿರಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಅವರು “ಎಲ್ಲಾ ವಿರೋಧ ಪಕ್ಷಗಳು (ತೃಣಮೂಲ ಸೇರಿದಂತೆ) ಸಹಿ ಮಾಡಿದ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಹಿರಿಯ ನಾಯಕನಿಗೆ “ಉದ್ದೇಶಪೂರ್ವಕ ಅಗೌರವ” ತೋರಿಸಲಾಗಿದೆ ಎಂದು ದೂರಿದ್ದಾರೆ. ಅತ್ಯಂತ ಹಿರಿಯ ನಾಯಕನಿಗೆ ತೋರಿದ ಈ ಉದ್ದೇಶಪೂರ್ವಕ ಅಗೌರವದ ಬಗ್ಗೆ ನಮ್ಮ ಆಘಾತ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಾವು ಬರೆಯುತ್ತಿದ್ದೇವೆ. ಖರ್ಗೆ ಅವರಿಗೆ ನೀಡಬೇಕಾದ ಪ್ರೋಟೋಕಾಲ್ ಗೆ ಅನುಗುಣವಾಗಿ ಇರಲಿಲ್ಲ ಎಂದು ಕಾಂಗ್ರೆಸ್ ನಾಯಕ ಪತ್ರದಲ್ಲಿ ಬರೆದಿದ್ದಾರೆ.
ಇಂದು ಬೆಳಿಗ್ಗೆ ದ್ರೌಪತಿ ಮುರ್ಮು ಅವರು ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನ ಸೆಂಟ್ರಲ್ ಹಾಲ್ನ ಮುಂದಿನ ಸಾಲಿನ ಎಡ ಮೂಲೆಯಲ್ಲಿ ಕುಳಿತಿದ್ದರು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೆಚ್ಚು ಪ್ರಮುಖ ಸ್ಥಾನಗಳನ್ನು ಹೊಂದಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಇದು ಗೃಹ ಸಚಿವಾಲಯದಿಂದ ಉದ್ದೇಶಪೂರ್ವಕ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ.