ಬೆಂಗಳೂರು, ಜು 25 (DaijiworldNews/MS): ಜಾಗತಿಕವಾಗಿ ಹರಡಿರುವ ಮಂಕಿಫಾಕ್ಸ್ ಕಾಯಿಲೆ ಭಾರತದಲ್ಲೂ ಕಂಡುಬಂದಿದ್ದು, ಈ ಬಗ್ಗೆ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೆರೆಯ ರಾಜ್ಯ ಕೇರಳದಲ್ಲೂ ಮಂಕಿಫಾಕ್ಸ್ ಕಂಡುಬಂದಿದ್ದು, ಗಡಿಭಾಗ ಜಿಲ್ಲೆ ಸೇರಿದಂತೆ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ . ಇದರೊಂದಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿದ್ದೇವೆ. ಮಂಕಿಫಾಕ್ಸ್ ಪ್ರಕರಣ ಕಂಡು ಬಂದರೆ ರೋಗಿಗಳನ್ನು ಪ್ರತ್ಯೇಕಿಸಿ, ಅಗತ್ಯ ಚಿಕಿತ್ಸೆ ನೀಡುವ ಕುರಿತು ಸೂಚಿಸಲಾಗಿದೆ ಎಂದಿದ್ದಾರೆ.
ಕೋವಿಡ್ ನಂತೆ ಮಂಕಿಫಾಕ್ಸ್ ವೇಗವಾಗಿ ಹರಡುವುದಿಲ್ಲ. ಶಂಕಿತ ಬಳಸಿದ ವಸ್ತುಗಳ ಬಳಕೆಯಿಂದ ಮಂಕಿಫಾಕ್ಸ ಹರಡುತ್ತದೆ. ಪ್ರಕರಣ ಕಂಡು ಬಂದು ಕೂಡಲೇ ರೋಗಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿದರೆ ತೊಂದರೆ ಇಲ್ಲ. ಈ ಕಾಯಿಲೆಯಿಂದ ಸಾವು ನೋವು ತೀರಾ ಕಡಿಮೆ ಇದ್ದು, ಜನರ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಬೇಕು ಎಂದು ಮಾಹಿತಿ ನೀಡಿದ್ದಾರೆ