ನವದೆಹಲಿ, ಜು 24 (DaijiworldNews/SM): ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿತ ರಾಮನಾಥ ಕೋವಿಂದ್ ಅವರು ವಿದಾಯ ಭಾಷಣ ಮಾಡಿದ್ದಾರೆ. ಪ್ರಕೃತಿ ಮಾತೆಗೆ ಎದುರಾಗಿರುವ ಸಂಕಟದ ಬಗ್ಗೆ ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿದ್ದಾರೆ. ಪ್ರಕೃತಿ ಮಾತೆ ತೀವ್ರ ಸಂಕಟದಲ್ಲಿದ್ದು, ಹವಾಮಾನ ಬಿಕ್ಕಟ್ಟು ಭೂಮಿಯ ಭವಿಷ್ಯವನ್ನು ಅಪಾಯಕ್ಕೆ ದೂಡಬಹುದು ಎಂದು ತಮ್ಮ ವಿದಾಯ ಭಾಷಣದಲ್ಲಿ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಧಿಕಾರವಧಿ ನಾಳೆ ಮುಗಿಯಲಿದ್ದು ಇಂದು (ಭಾನುವಾರ) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. '5 ವರ್ಷಗಳ ಹಿಂದೆ ನಿಮ್ಮ ಚುನಾಯಿತ ಜನಪ್ರತಿನಿಧಿಗಳ ಮೂಲಕ ನಾನು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೆ. ರಾಷ್ಟ್ರಪತಿಯಾಗಿ ನನ್ನ ಅವಧಿ ಇಂದಿಗೆ ಮುಕ್ತಾಯವಾಗುತ್ತಿದೆ. ನಿಮ್ಮೆಲ್ಲರಿಗೂ ಮತ್ತು ನಿಮ್ಮ ಸಾರ್ವಜನಿಕ ಪ್ರತಿನಿಧಿಗಳಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದು ಕೋವಿಂದ್ ಹೇಳಿದ್ದಾರೆ.
ಕಾನ್ಪುರ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಬೆಳೆದ ರಾಮನಾಥ್ ಕೋವಿಂದ್ ಇಂದು ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕಾಗಿ ನಾನು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಗೆ ವಂದಿಸುತ್ತೇನೆ. ರಾಷ್ಟ್ರಪತಿಗಳ ಅವಧಿಯಲ್ಲಿ ನನ್ನ ಹುಟ್ಟೂರಿಗೆ ಭೇಟಿ ನೀಡಿದ್ದು ಮತ್ತು ನನ್ನ ಕಾನ್ಪುರ ಶಾಲೆಯ ಹಿರಿಯ ಶಿಕ್ಷಕರ ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದ ಪಡೆಯುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಾಗಿವೆ ಎಂದು ನಿರ್ಗಮಿತ ರಾಷ್ಟ್ರಪತಿ ಹೇಳಿದ್ದಾರೆ.