ಪಾಟ್ನಾ, ಜು 24 (DaijiworldNews/DB): ಪಟಾಕಿ ಉದ್ಯಮಿಯೊಬ್ಬರ ಮನೆಯಲ್ಲಿ ಪಟಾಕಿಗಳು ಸ್ಪೋಟಗೊಂಡು ಆರು ಮಂದಿ ಮೃತಪಟ್ಟ ಘಟನೆ ಬಿಹಾರದ ಸರಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟಾಕಿ ತಯಾರಿಕೆ ಕಟ್ಟಡ ಪಕ್ಕದಲ್ಲೇ ಇದ್ದು, ಪಟಾಕಿ ಉದ್ಯಮಿ ಶಬೀರ್ ಹುಸೇನ್ ಅವರು ಪಟಾಕಿಗಳನ್ನು ತಮ್ಮ ಮನೆಯಲ್ಲಿ ದಾಸ್ತಾನು ಇರಿಸಿದ್ದರು. ಇದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪಟಾಕಿಗಳು ಸ್ಪೋಟಗೊಂಡಿವೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಸುಮಾರು ಎಂಟು ಮಂದಿ ಜಖಂಗೊಂಡು ಕುಸಿದ ಮನೆಯ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಪೋಟದ ಪರಿಣಾಮ ಮನೆಗೂ ಹಾನಿ ಉಂಟಾಗಿದೆ. ಮನೆಯ ಇತರ ಭಾಗಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳ ಮಾಹಿತಿ ಗೊತ್ತಾದ ಕೂಡಲೇ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಗಾಯಗೊಂಡ ಹಲವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಮನೆಯ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.
ಸ್ಪೋಟಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ವಿಧಿ ವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದ್ದು, ಕಾರಣ ಪತ್ತೆಹಚ್ಚಲಾಗುತ್ತಿದೆ ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.