ಬೆಂಗಳೂರು, ಜು 24 (DaijiworldNews/DB): ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು. ಆನಂತರ ಸಿಎಂ ಹುದ್ದೆ ಬಗ್ಗೆ ಮಾತನಾಡೋಣ. ಈಗ ಅದನ್ನು ಚರ್ಚಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ನಮ್ಮ ನಾಯಕರಿಗೆ ನನ್ನ ಮನವಿ ಇಷ್ಟೇ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾವು ಶ್ರಮಿಸಬೇಕೇ ಹೊರತು ಈಗಲೇ ಸಿಎಂ ಹುದ್ದೆಯ ವಿಚಾರವಾಗಿ ಚರ್ಚೆ ಮಾಡುವುದು ಸರಿಯಲ್ಲ. 113 ಸ್ಥಾನ ಪಕ್ಷಕ್ಕೆ ಬಂದ ಬಳಿಕ ಆ ಯೋಚನೆ ಮಾಡೋಣ. ಅಲ್ಲದೆ, ಯಾರು ಸಿಎಂ ಆಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷ ಬಹುಮತ ಪಡೆದ ಬಳಿಕ ರಾಜ್ಯಕ್ಕೆ ಹೈಕಮಾಂಡ್ನಿಂದ ವೀಕ್ಷಕರು ಬರುತ್ತಾರೆ. ಶಾಸಕರಿಂದ ಅವರು ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ಮಾಹಿತಿ ನೀಡಿದ ಬಳಿಕ ಸಿಎಂ ಆಯ್ಕೆ ನಡೆಯುತ್ತದೆ. ಇದು ವಾಡಿಕೆ ಎಂದರು.
ಬಾಯ್ಮುಚ್ಚಿಕೊಂಡು ಕೆಲಸ ಮಾಡಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರಾಗಿ ಅವರು ಹೇಳಿದ್ದು ಸರಿಯಾಗಿಯೇ ಇದೆ. ಅದರಲ್ಲಿ ತಪ್ಪೇನಿಲ್ಲ ಎಂದರು.
ಡಿಕೆಶಿಯಿಂದ ಒಕ್ಕಲಿಗ ಸಮುದಾಯದ ಓಲೈಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಓಲೈಕೆ ತಪ್ಪೇನಿಲ್ಲ. ಆ ಸಮುದಾಯ ಆಸೆ ಪಟ್ಟರೆ ಅದನ್ನು ಬೇಡ ಎನ್ನಲು ನಾವು ಯಾರೂ ಅಲ್ಲ. ಪಕ್ಷ ಸಾಮೂಹಿಕ ನಾಯಕತ್ವದಲ್ಲೇ ಮುಂದುವರಿಯಲಿದ್ದು, ಒಗ್ಗಟ್ಟಿನ ಇಚ್ಛಾಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ಸಹೋದರರು. ಅವರ 80 ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಲು ಹೋಗಿದ್ದೆ. ಈ ವೇಳೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.