ಲಖನೌ, ಜು 24 (DaijiworldNews/DB): ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಧ್ವಜಗಳು ಪತ್ತೆಯಾದ ಪ್ರಸಂಗ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಚೇರಿಯಲ್ಲಿ ನಡೆದಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಧ್ವಜ ಪತ್ತೆಯಾಗಿರುವ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯಾರು ಇರಿಸಿದ್ದಾರೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುವುದಾಗಿ ಯುವ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಆದರೆ ಯಾವುದೇ ನಾಯಕರು ಇದರ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಹಿಂದೆ ಕಾಂಗ್ರೆಸ್ನಲ್ಲಿದ್ದ ಜೀಶನ್ ಹೈದರ್ ಎಂಬುವವರು ಈ ಕುರಿತು ವೀಡಿಯೋ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಬಿಜೆಪಿ ಧ್ವಜಗಳನ್ನು ಆಶ್ಚರ್ಯದಿಂದ ಕಾಂಗ್ರೆಸ್ ಪದಾಧಿಕಾರಿಗಳು ವೀಕ್ಷಿಸುತ್ತಿರುವುದು ದಾಖಲಾಗಿದೆ. ಆದರೆ ಕಾಂಗ್ರೆಸ್ನವರಿಗೆ ಇದರಿಂದ ಯಾವುದೇ ಆಘಾತ ಉಂಟಾಗಿಲ್ಲ. ಇದು ಕಾಂಗ್ರೆಸ್ನ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುತ್ತದೆ ಎಂದೂ ಹೈದರ್ ಅವರು ಬರೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.