ಮುಂಬೈ, ಜು 24 (DaijiworldNews/DB): ಪ್ರಿಯತಮನ ಬಳಿ ಹಣ ಇಲ್ಲವೆಂದು ಆತನನ್ನು ತಿರಸ್ಕರಿಸಿದ್ದ ಪ್ರೇಯಸಿಯ ಮನೆಗೇ ಪ್ರಿಯತಮ ಕನ್ನ ಹಾಕಿ ಚಿನ್ನಾಭರಣ ದೋಚಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನ ಅಂಧೇರಿಯ ಲೋಖಂಡವಾಲಾನ ನಿವಾಸಿ ಪ್ರೀತೇಶ್ ಮಾಂಜ್ರೇಕರ್ ಎಂಬಾತನೇ ಪ್ರಕರಣದ ಸೂತ್ರದಾರಿ. ಈತ ತನ್ನ ಇಬ್ಬರು ಸ್ನೇಹಿತರ ಮೂಲಕ ಪ್ರಿಯತಮೆಯ ಮನೆಗೆ ಕನ್ನ ಹಾಕಿದ್ದು, ಸದ್ಯ ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರೀತೇಶ್ ಶ್ರೀಮಂತ ಮನೆತನದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆತನ ಬಳಿ ತನಗೆ ಬೇಕಾಗುವಷ್ಟು ಹಣ ಇಲ್ಲ ಎಂದರಿತ ಯುವತಿ ಪ್ರೀತಿಗೆ ಕೈ ಕೊಟ್ಟಿದ್ದಳು. ಇದನ್ನು ಸಹಿಸದ ಪ್ರೀತೇಶ್ ಪ್ರಿಯತಮೆಯ ಮನೆಯನ್ನೇ ದೋಚುವ ಯೋಜನೆ ರೂಪಿಸಿದ್ದ. ಅದಕ್ಕಾಗಿ ಮನೆಯ ನಕಲಿ ಕೀ ತಯಾರಿಸಿಕೊಂಡಿದ್ದ. ಆಕೆಯ ಮನೆಯವರು ಬೇರೆ ಕಡೆ ಹೋಗಿದ್ದಾಗ ಪ್ರೇಯಸಿಯನ್ನು ಹೊಟೇಲ್ಗೆ ಕರೆಸಿಕೊಂಡಿದ್ದ. ಅಲ್ಲದೆ ನಕಲಿ ಕೀಯನ್ನು ಸ್ನೇಹಿತಾದ ರೋಹಿತ್ ಕೋರ್ಡೆ ಹಾಗೂ ರೋಹಿತ್ ಹೆಗ್ಡೆಗೆ ನೀಡಿದ್ದ. ಬಳಿಕ ಪ್ರೇಯಸಿ ಹೊಟೇಲ್ಗೆ ಆಗಮಿಸಿದ್ದ ವೇಳೆ ಸ್ನೇಹಿತರಿಬ್ಬರು ಆಕೆಯ ಮನೆಗೆ ಕನ್ನ ಹಾಕಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಕಳವಾಗಿರುವ ವಿಷಯ ಗೊತ್ತಾಗಿ ಪ್ರಿಯತಮೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ ಪ್ರೀತೇಶ್ ಕೂಡಾ ಜೊತೆಗೇ ಹೋಗಿದ್ದಾನೆ. ದೂರು ಪಡೆದುಕೊಂಡ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದಾಗ ಇಬ್ಬರೂ ಸ್ನೇಹಿತರು ಸಿಕ್ಕಿ ಬಿದ್ದಿದ್ದಾರೆ. ಅವರನ್ನು ವಿಚಾರಣೆ ನಡೆಸಿದಾಗ ಪ್ರೀತೇಶ್ನೇ ಇದರ ಸೂತ್ರದಾರಿ ಎಂಬುದು ಗೊತ್ತಾಗಿದೆ. ಕೂಡಲೇ ಪ್ರೀತೇಶ್ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕನ್ನದ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾನೆ.
ಯುವತಿ ಹಣವಿಲ್ಲ ಎಂಬ ಕಾರಣಕ್ಕೆ ನನ್ನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾಳೆ. ಆದರೆ ಅವಳನ್ನು ಬಿಟ್ಟು ಇರಲು ನನ್ನಿಂದ ಸಾಧ್ಯವಿಲ್ಲ. ಅವಳಿಗೆ ಹಣವೇ ಮುಖ್ಯವಾಗಿತ್ತು. ಹೀಗಾಗಿ ಅವರ ಮನೆಯನ್ನೇ ದೋಚಿ ಬಿಟ್ಟರೆ ಅಲ್ಲಿ ಏನೂ ಉಳಿಯುವುದಿಲ್ಲ. ಆಗ ಆಕೆ ನನ್ನ ಬಳಿಯೇ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆ ಮೂಲಕ ಮತ್ತೆ ಅವಳನ್ನು ನಾನು ಪಡೆಯಬಹುದು ಎಂಬ ಕಾರಣಕ್ಕಾಗಿ ಮನೆ ದೋಚುವ ಯೋಜನೆ ಮಾಡಿದ್ದೇನೆ ಎಂದು ಪ್ರೀತೇಶ್ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.
ಸದ್ಯ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.