ನವದೆಹಲಿ, ಜು 24 (DaijiworldNews/DB): ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ ಪೊಲೀಸರು ಓರ್ವ ವಿದೇಶಿ ಮಹಿಳೆ ಸಹಿತ ಐವರನ್ನು ಬಂಧಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಬಂಧಿತರನ್ನು ಮೊಹಮ್ಮದ್ ಅರೂಪ್ (34), ಚಂಡೆ ಸಾಹ್ನಿ (30), ಅಲಿ ಶೇರ್ ತಿಲ್ಲಾದೇವ್ (48), ಜುಮಾಯೆವಾ ಅಜೀಜಾ (37) ಮತ್ತು ಮೆರೆಡೋಬ್ ಅಹ್ಮದ್ (48) ಎಂದು ಗುರುತಿಸಲಾಗಿದೆ. ಅಜೀಜಾ ಮತ್ತು ಅಹ್ಮದ್ ತುರ್ಕ ಮೆನಿಸ್ತಾನ್ ಮೂಲದವರಾಗಿದ್ದಾರೆ.
ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಗ್ರಾಹಕನ ಸೋಗಿನಲ್ಲಿ ಕಾನ್ಸ್ಟೇಬಲ್ ಒಬ್ಬರನ್ನು ಕಳುಹಿಸಲಾಗಿತ್ತು. ಅದಕ್ಕಾಗಿ ಏಜೆಂಟ್ಗಳನ್ನು ಸಂಪರ್ಕಿಸಲಾಯಿತು. ಬಳಿಕ ಮಾಳವೀಯ ನಗರದಲ್ಲಿರುವ ವಿಳಾಸಕ್ಕೆ ಸಂಬಂಧಪಟ್ಟವರು ಗ್ರಾಹಕರನ್ನು ಕಳುಹಿಸಿದ್ದಾರೆ. ಅಲ್ಲಿ ಅರೂಪ್ ಮತ್ತು ಸಾಹ್ನಿ ಹತ್ತು ವಿದೇಶೀ ಮಹಿಳೆಯರನ್ನು ನಿಲ್ಲಿಸಿದ್ದು, ಅವರಲ್ಲಿ ಓರ್ವಳನ್ನು ಆಯ್ಕೆ ಮಾಡುವಂತೆ ಕೇಳಿದ್ದರು. ಈ ವೇಳೆ ತತ್ಕ್ಷಣ ದಾಳಿ ನಡೆಸಿದ ಪೊಲೀಸರು ಇಬ್ಬರು ಏಜೆಂಟ್ಗಳು ಸಹಿತ ಐವರನ್ನು ಬಂಧಿಸಿದರು.
ಭಾರತದಲ್ಲಿ ಉಳಿದುಕೊಳ್ಳಲು ಮಾನ್ಯತೆ ಹೊಂದಿದ ವೀಸಾ ಮತ್ತು ಪಾಸ್ಪೋರ್ಟ್ನ್ನು ಹಾಜರುಪಡಿಸುವಂತೆ ವಿದೇಶೀಯರನ್ನು ಕೇಳಲಾಗಿದೆ. ಆದರೆ ಅದಕ್ಕವರು ವಿಫಲರಾಗಿದ್ದಾರೆ. ಅಜೀಜಾ ಹಾಗೂ ಆಕೆಯ ಪತಿ ಅಹ್ಮದ್ ದಂಧೆಯ ಕಿಂಗ್ಪಿನ್ಗಳಾಗಿದ್ದಾರೆಂದು ಉಪ ಪೊಲೀಸ್ ಆಯುಕ್ತ ವಿಚಿತ್ರ ವೀರ್ ಹೇಳಿದ್ದಾರೆ.
ಉಜ್ಬೆಕಿಸ್ತಾನ ಮೂಲದ ಶೇರ್ ಎಂಬಾತ ವಿದೇಶಿ ಮಹಿಳೆಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಭಾರತಕ್ಕೆ ಕರೆ ತರುತ್ತಿದ್ದ. ಬಳಿಕ ಅಜೀಜಾ ಮತ್ತಾಕೆಯ ಪತಿಗೆ ಒಪ್ಪಿಸುತ್ತಿದ್ದ. ಬಳಿಕ ವೇಶ್ಯಾವಾಟಿಕೆಗೆ ಅವರನ್ನು ಒತ್ತಾಯದಿಂದ ದೂಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.