ಬೆಂಗಳೂರು, ಜು 24 (DaijiworldNews/DB): ಯಡಿಯೂರಪ್ಪನವರು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆಯೇ ಹೊರತು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತೇನೆ ಎಂದಿಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಬಿಎಸ್ವೈ ಮಾಸ್ ಲೀಡರ್. ಸಿಎಂ ಆಗಿ ಸಾಕಷ್ಟು ಜನಪರ ಕೆಲಸ ಮಾಡಿದವರು. ಪಕ್ಷ ಕಟ್ಟುವಲ್ಲಿ ಅವರ ಶ್ರಮ ದೊಡ್ಡದು. ಬಿಜೆಪಿಯಲ್ಲಿ ಪ್ರಧಾನಿ ಸಹಿತ ಎಲ್ಲರಿಗೂ ಟಿಕೆಟ್ ಅಂತಿಮಗೊಳ್ಳುವುದು ಪಾರ್ಲಿಮೆಂಟರಿ ಬೋರ್ಡ್ನಲ್ಲಿ. ಹೀಗಾಗಿ ಯಾರಿಗೆ ಎಲ್ಲಿ ಟಿಕೆಟ್ ನೀಡಬೇಕೆಂಬುದನ್ನು ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನಿಸುತ್ತದೆ. ಪಕ್ಷದ ವ್ಯವಸ್ಥೆ ಬಗ್ಗೆ ಹಿರಿಯರಾದ ಯಡಿಯೂರಪ್ಪನವರಿಗೆ ತಿಳಿದಿದೆ. ಅವರು ಸಲಹೆ ನೀಡಿದ್ದಾರಷ್ಟೇ. ಗೊಂದಲ ಇಲ್ಲ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಗುದ್ದಾಟದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸಿಎಂ ಹುದ್ದೆ ಯಾರ ಫಾದರ್ ಪ್ರಾಪರ್ಟಿ ಅಲ್ಲ. ಕುರ್ಚಿಗಾಗಿ ಕಾಂಗ್ರೆಸ್ಸಿಗರು ಹೋರಾಟ ಮಾಡುತ್ತಿರಲಿ. ಯಾಕೆಂದರೆ ಅದು ಅವರಿಗೆ ಸಿಗುವುದಿಲ್ಲ. ಬಿಜೆಪಿಗೆ ಮತ್ತೆ ಅಧಿಕಾರ ಸಿಗುತ್ತದೆ. ಒಬ್ಬರು ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನೂ ಕೆಲವರು ಹೋಗುವವರಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರೇ ಈ ಬಾರಿ ಸಿಎಂ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಕ್ಕಲಿಗರು ಸಣ್ಣ ಮನಸ್ಥಿತಿಯಲ್ಲಿ ಯೋಚಿಸುವುದಿಲ್ಲ. ಭ್ರಷ್ಟಾಚಾರವನ್ನೂ ಬಯಸುವವರಲ್ಲ. ಸರ್ವಹಿತ ರಾಜಕೀಯವನ್ನಷ್ಟೇ ಬಯಸುತ್ತಾರೆ ಎಂದರು.