ಗುವಾಹಟಿ, ಜು 24 (DaijiworldNews/DB): ವೇಶ್ಯಾವಾಟಿಕೆ ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೇಘಾಲಯ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬರ್ನಾರ್ಡ್ ಎನ್. ಮರಾಕ್ ಅಲಿಯಾಸ್ ರಿಂಪು ಅವರ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿ 73 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಈ ಆರೋಪವನ್ನು ರಿಂಪು ತಳ್ಳಿ ಹಾಕಿದ್ದಾರೆ.
ಸ್ವಚ್ಚತೆ ಇಲ್ಲದ ಕೊಠಡಿಯೊಂದರಲ್ಲಿ ಆರು ಮಕ್ಕಳು ಪತ್ತೆಯಾಗಿದ್ದರು. ಎಲ್ಲರೂ ಆಘಾತದಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಅಲ್ಲದೆ, ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಪರಿಶೀಲಿಸಿದಾಗ ವೇಶ್ಯಾವಾಟಿಕೆಗೆ ಬಳಸಿಕೊಂಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಆದರೆ ರೆಸಾರ್ಟ್ನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿರುವ ಆರೋಪವನ್ನು ರಿಂಪು ಅವರು ತಳ್ಳಿ ಹಾಕಿದ್ದು, ರಾಜಕೀಯ ದ್ವೇಷಕ್ಕಾಗಿ ನನ್ನ ವಿರುದ್ದ ಆರೋಪ ಮಾಡಿ ಪೊಲೀಸ್ ಇಲಾಖೆಯನ್ನು ಮುಖ್ಯಮಂತ್ರಿ ಕಾನ್ ಡಾಡ್ ಸಂಗ್ಮಾ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾನು ಕೆಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದೇನೆ. ಆದರೆ ಆ ಮಕ್ಕಳನ್ನು ಪೊಲೀಸರು ವೃಥಾ ಬಂಧಿಸಿದ್ದಾರೆ. ಹೋಂಸ್ಟೇಗೆ ವೇಶ್ಯಾಗೃಹ ಪಟ್ಟ ನೀಡುವುದು ತಪ್ಪು. ಪಾರ್ಟಿ ಮಾಡುತ್ತಿದ್ದ ವಯಸ್ಕ ಮಹಿಳೆಯರನ್ನು ವೇಶ್ಯೆ ಎನ್ನುವುದೂ ತಪ್ಪು ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.