ಭೋಪಾಲ್, ಜು 24 (DaijiworldNews/DB): ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ನಾಲ್ಕನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಹೇಯ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಆರು ದಿನಗಳ ಹಿಂದಷ್ಟೇ ಈ ಬಾಲಕಿ ಶಾಲೆಗೆ ದಾಖಲಾತಿ ಪಡೆದುಕೊಂಡಿದ್ದಳು.
ಎಂಟೂವರೆ ವರ್ಷದ ಬಾಲಕಿ ಶುಕ್ರವಾರ ಮಧ್ಯಾಹ್ನ ಊಟದ ಸಮಯದಲ್ಲಿ ಟಾಯ್ಲೆಟ್ಗೆ ಹೋಗಿದ್ದಳು. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಅಳುತ್ತಿರುವುದನ್ನು ಕಂಡ ಸಹಪಾಠಿಗಳು ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಪ್ರಶ್ನಿಸಿದಾಗ ಆರೋಪಿ ಹಳದಿ ಶರ್ಟ್ ಧರಿಸಿದ್ದ ಎಂಬುದಾಗಿ ಮಾಹಿತಿ ನೀಡಿದ್ದಾಳೆ. ಪೊಲೀಸರು ವಿಚಾರಣೆ ನಡೆಸಿದಾಗ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯ ಪತಿ ಲಕ್ಷ್ಮೀನಾರಾಯಣ್ ಎಂಬವನೇ ಆರೋಪಿ ಎಂಬುದು ಗೊತ್ತಾಗಿದೆ.
ಈತ ಈ ಶಾಲೆಯಲ್ಲಿ ವಾಚ್ಮ್ಯಾನ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.