ಬೆಂಗಳೂರು, ಜು 24 (DaijiworldNews/DB): ಗಾಂಜಾ ಅಮಲಿನಲ್ಲಿ ಚಿನ್ನಾಭರಣ, ಮೊಬೈಲ್ ದರೋಡೆಗೈದಿದ್ದ ಗ್ಯಾಂಗ್ ಅಮಲು ಇಳಿದ ಮೇಲೆ ಪ್ರಾಯಶ್ಚಿತಕ್ಕಾಗಿ ದೇವರ ಮೊರೆ ಹೋಗಿ ಕದ್ದ ವಸ್ತುಗಳನ್ನು ಮಾರಾಟ ಮಾಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲಿ ಇಬ್ಬರು ಬಾಲಾರೋಪಿಗಳು. ನಿತೀನ್ ರಾಜ್ (18), ನಿತಿನ್ ರಾಜ್ ( 29 ) ಬಂಧಿತರು. ಆರೋಪಿಗಳಲ್ಲಿ ಓರ್ವ ನಿತಿನ್ ರಾಜ್ ಎಂಬಿಎ ಪದವಿಧರನಾಗಿದ್ದು, ಪತ್ನಿ, ಮಗು ಇದ್ದಾರೆ. ಗಾಂಜಾ, ಬೆಟ್ಟಿಂಗ್ ದಂಧೆ, ಖರ್ಚಿಗಾಗಿ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಜೈಲಿಗೂ ಹೋಗಿ ಬಂದಿದ್ದ.
ಬಾರ್ನಲ್ಲಿ ಕುಡಿದು ಕುಳಿತಿದ್ದ ಲೋಕೇಶ್ ಎಂಬಾತನ ಬಳಿ ಬೈಕ್ನಲ್ಲಿ ಬಂದಿದ್ದ ಮೂವರು ಆರೋಪಿಗಳು ಲಾಂಗು ತೋರಿಸಿ 50 ಸಾವಿರ ರೂ. ಮೌಲ್ಯದ ಎರಡು ಚಿನ್ನದ ಉಂಗುರ, 1.40 ಲಕ್ಷ ಮೌಲ್ಯದ 28 ಗ್ರಾಂ ಚಿನ್ನದ ಸರ ಹಾಗೂ 20 ಸಾವಿರ ರೂ. ನಗದು, ಮೊಬೈಲ್ ದರೋಡೆಗೈದು, ಆತನ ಬೈಕ್ ಸಹಿತ ಪರಾರಿಯಾಗಿದ್ದರು. ಬಳಿಕ ಪ್ರಾಯಶ್ಚಿತ್ತಕ್ಕಾಗಿ ದರೋಡೆ ಮಾಡಿದ ಬೈಕ್ನಲ್ಲಿ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಬೆಂಗಳೂರಿಗೆ ಹಿಂತಿರುಗಿ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾರೆ. ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾಗೆ ತೆರಳಿ ಮೋಜು ಮಸ್ತಿ ಮಾಡಿ ಬೆಂಗಳೂರಿಗೆ ಹಿಂತಿರುಗಿದ್ದಾರೆ.
ಲೋಕೇಶ್ ಅವರು ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.