ಜಲ್ನಾ (ಮಹಾರಾಷ್ಟ್ರ), ಜು 24 (DaijiworldNews/DB): ಪತ್ನಿ ತವರು ಮನೆಯಿಂದ ಮನೆಗೆ ಮರಳಬೇಕೆಂದು ವ್ಯಕ್ತಿಯೋರ್ವ ಮೊಬೈಲ್ ಟವರ್ ಏರಿ ಕುಳಿತ ಪ್ರಸಂಗ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.
ಗಣಪತ್ ಬಾಕಲ್ ಎಂಬಾತ ಮೊಬೈಲ್ ಟವರ್ ಏರಿದವ. ಬದ್ನಾಪುರ ತಹಸಿಲ್ನ ದಬಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈತನ ಪತ್ನಿ ತವರು ಮನೆಗೆ ಹೋಗಿದ್ದಳು. ಇದರಿಂದ ಅಸಮಾಧಾನಗೊಂಡ ಈತ ಪತ್ನಿ ತವರು ಮನೆಯಿಂದ ತನ್ನ ಮನೆಗೆ ಮರಳಬೇಕೆಂದು ಹಲವಾರು ಬಾರಿ ಕೇಳಿಕೊಂಡಿದ್ದಾನೆ. ಆದರೆ ಆಕೆ ಮನೆಗೆ ಮರಳದ ಹಿನ್ನೆಲೆಯಲ್ಲಿ 100 ಅಡಿ ಎತ್ತರದ ಮೊಬೈಲ್ ಟವರ್ ಮೇಲೆ ಹತ್ತಿದ್ದು, ಹೆಂಡತಿ ಮನೆಗೆ ಮರಳಬೇಕೆಂದು ಆಗ್ರಹಿಸಿದ್ದಾನೆ. ಸುಮಾರು ನಾಲ್ಕು ತಾಸು ಟವರ್ ಮೇಲೆಯೇ ವ್ಯಕ್ತಿ ಕುಳಿತಿದ್ದ ಎನ್ನಲಾಗಿದೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕೌಟುಂಬಿಕ ಕಲಹ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ಬಳಿಕ ಆತ ಕೆಳಗೆ ಇಳಿದಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಬಿಡುಗಡೆ ಮಾಡಿದರು.