ಬೆಂಗಳೂರು, ಜು 23 (DaijiworldNews/DB): ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ನಿನ್ನೆಯಷ್ಟೇ ಘೋಷಣೆ ಮಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಿ ಶನಿವಾರ ಮಹತ್ವದ ಚರ್ಚೆ ನಡೆಸಿದರು. ಸಚಿವ ಆರ್. ಅಶೋಕ್ ಜೊತೆಗಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರತಿ ಬಾರಿ ಶಿಕಾರಿಪುರಕ್ಕೆ ಭೇಟಿ ನೀಡಿದಾಗಲೂ ಯಡಿಯೂರಪ್ಪ ಅವರೇ ಮುಂದಿನ ಶಾಸಕರಾಗಬೇಕೆಂಬ ಇಚ್ಚೆಯನ್ನು ಅಲ್ಲಿನ ಜನ ತೋರ್ಪಡಿಸುತ್ತಿದ್ದರು. ಆದರೆ ಜನರ ಒತ್ತಾಸೆ ಹಾಗೂ ಒತ್ತಾಯದಂತೆ ಈ ಬಾರಿ ನಾನು ಸ್ಪರ್ಧಿಸುವುದಿಲ್ಲ, ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಸಲಹೆ ನೀಡಿದ್ದೇನಷ್ಟೇ ಎಂದು ಯಡಿಯೂರಪ್ಪ ತಿಳಿಸಿದ್ದಾರೆ ಎಂಬುದಾಗಿ ಸಿಎಂ ವಿವರಿಸಿದರು.
ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈಗ ಎದ್ದಿರುವ ಗೊಂದಲಗಳಿಗೆ ಮಾಧ್ಯಮಗಳು ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.
ಯಡಿಯೂರಪ್ಪ ಎಂದರೆ ಶಕ್ತಿ. ಬಿಜೆಪಿ ಮಾತ್ರವಲ್ಲ, ರಾಜ್ಯ, ದೇಶಕ್ಕೂ ಅವರು ಸ್ಪೂರ್ತಿ. ಅವರು ರಾಜಕೀಯ ನಿವೃತ್ತಿ ಪಡೆಯುವುದಿಒಲ್ಲ. ನಾಳೆಯಿಂದಲೇ ಪಕ್ಷದ ಕಾರ್ಯಕ್ರಮಗಳನ್ನು ಸಿದ್ದಪಡಿಸಿ, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವುದೇ ನನ್ನ ಗುರಿ ಎಂದಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಜುಲೈ 28ರಂದು ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ವೈ ರಾಜಕೀಯ ನಿವೃತ್ತಿ ಕುರಿತು ಎದ್ದಿರುವ ಊಹಾಪೋಹಗಳಿಗೆ ಸಿಎಂ ಬೊಮ್ಮಾಯಿ ತೆರೆ ಎಳೆದರು.
ವಿಜಯೇಂದ್ರರಿಗೆ ಕ್ಷೇತ್ರ ಬಿಟ್ಟುಕೊಡುವ ಮೂಲಕ ಬಿಎಸ್ವೈ ರಾಜ್ಯ ನಾಯಕರನ್ನು ಮತ್ತು ಹೈಕಮಾಂಡ್ನ್ನು ಇಕ್ಕಟ್ಟಿಗೆ ಸಿಲುಕಿಸಿದರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದಾಗಲೇ ಬಿಎಸ್ವೈ ಯಾರನ್ನೂ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದವರಲ್ಲ. ಅವರು ಸ್ಪಷ್ಟ ನಿಲುವು ಹೊಂದಿದವರು. ಯಾವ ಗೊಂದಲವೂ ಈಗ ಅನಗತ್ಯ ಎಂದು ಪ್ರತಿಕ್ರಿಯಿಸಿದರು.