ಬೆಂಗಳೂರು, ಜು 23 (DaijiworldNews/DB): ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣವು ಕಾಂಗ್ರೆಸ್ನ ಕೂಸು. ಇದರಲ್ಲಿ ಅಧಿಕೃತವಾಗಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೇ ನಿಲ್ಲುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣವು ಕಾಂಗ್ರೆಸ್ನ ಮನೆ ಬಾಗಿಲಿಗೇ ಹೋಗಿ ನಿಲ್ಲುತ್ತದೆ. ಈ ಹಗರಣ ಅವರದೇ ಕೂಸು ಎಂದರು.
ಅಮೃತ್ ಪೌಲ್ ಬಂಧನ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಈ ಪ್ರಕರಣದಲ್ಲಿ ಸಚಿವರು, ದೊಡ್ಡವರ ಪಾತ್ರವಿದೆ. ಹಾಲಿ, ಮಾಜಿ ಸಿಎಂ ಹಾಗೂ ಬಿ.ವೈ.ವಿಜಯೇಂದ್ರರೂ ಭಾಗಿಯಾಗಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯಗೆ ಉತ್ತರ ಕೊಡುವ ಅಗತ್ಯ ನನಗಿಲ್ಲ. ಕಪೋಲಕಲ್ಪಿತ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಅಧಿಕೃತವಾಗಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೇ ನಿಲ್ಲುವುದಿಲ್ಲ ಎಂದು ಪ್ರತಿಕ್ರಿಯಿಸಿದರು.