ದಾವಣಗೆರೆ, ಜು 23 (DaijiworldNews/DB): ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಬಗ್ಗೆ ಮೊದಲು ಹೇಳಿಕೆ ಕೊಟ್ಟವರೇ ಡಿ.ಕೆ. ಶಿವಕುಮಾರ್ ಅವರು. ಆ ಬಳಿಕ ನಾವೆಲ್ಲಾ ಹೇಳಿದ್ದೇವಷ್ಟೇ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬಾಯಿ ಮುಚ್ಚಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ ತಿರುಗೇಟು ನೀಡಿದ ಅವರು, ಒಕ್ಕಲಿಗರ ಸಮಾವೇಶದಲ್ಲಿ ಬಹಿರಂಗವಾಗಿಯೇ ಡಿಕೆಶಿಯವರು ಮುಖ್ಯಮಂತ್ರಿ ಹುದ್ದೆ ಕುರಿತು ಮಾತನಾಡಿದ್ದಾರೆ. ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇದೆ. ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷರು ಕೋಪಿಸಿಕೊಂಡರೆ ನಾನೇನು ಮಾಡುವುದಕ್ಕಾಗುತ್ತದೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಹೈಕಮಾಂಡ್ ತೀರ್ಮಾನದಂತೆ ಆಗುತ್ತದೆ. ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅದನ್ನು ವ್ಯಕ್ತಪಡಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಪಕ್ಷದ ಜೊತೆಗೆ ವ್ಯಕ್ತಿಪೂಜೆಯೂ ಅಗತ್ಯ. ಡಿಕೆಶಿ ಲೆವೆಲ್ ದೊಡ್ಡದಿರಬಹುದು. ಆದರೆ ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ನೀಡಿದ ಕಾರ್ಯಕ್ರಮ ಜನಗಳಿಗೆ ಮೆಚ್ಚುಗೆಯಾಗಿದೆ. ಹಾಗಾಗಿ ಅವರೇ ಸಿಎಂ ಆಗಬೇಕೆಂಬುದು ಜನರಿಚ್ಚೆಯೂ ಆಗಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಮೊದಲು ಕಾಂಗ್ರೆಸ್, ಬಳಿಕ ಸಿದ್ದರಾಮಯ್ಯ ಎಂಬುದು ಹೈಕಮಾಂಡ್ಗೂ ಗೊತ್ತಿರುವ ವಿಚಾರ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಇದೇ ವೇಳೆ ಹೇಳಿದರು.