ಗುವಾಹಟಿ, ಜು 23 (DaijiworldNews/HR): ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ 19 ಅಸ್ಸಾಂ ಕಟ್ಟಡ ಕಾರ್ಮಿಕರ ಪೈಕಿ ಏಳು ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಘೀ ಬೆಂಗಿಯಾ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್, 7 ಕಾರ್ಮಿಕರು ಪತ್ತೆಯಾಗಿದ್ದು, ಉಳಿದವರಿಗಾಗಿ ಹುಡುತಾಟ ಮುಂದುವರೆದಿದೆ. ಪತ್ತೆಯಾದವರು ತುಂಬಾ ದುರ್ಬಲವಾಗಿದ್ದು ಇವರಿಗೆ ಆಹಾರ ಮತ್ತು ಔಷಧಿಗಳನ್ನು ನೀಡಲಾಗುತ್ತಿದ್ದು, ಎಲ್ಲರನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಶಿಬಿರದಲ್ಲಿ ಇರಿಸಲಾಗಿದೆ ಎಂದರು.
ಇನ್ನು ಭಾರತ- ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಿಂದ ಸ್ಪಲ್ಪ ದೂರದಲ್ಲಿನ ಗಡಿ ರಸ್ತೆ ನಿರ್ಮಾಣ ಸ್ಥಳದಿಂದ ಜುಲೈ 5 ರಂದು 19 ಕಾರ್ಮಿಕರು ನಾಪತ್ತೆಯಾಗಿದ್ದರು. ನಾಪತ್ತೆಯಾದ ಕಾರ್ಮಿಕರ ಗುಂಪನ್ನು ಹುಡುಕಲು ಅರುಣಾಚಲ ಪ್ರದೇಶದ ದೂರದ ಕುರುಂಗ್ ಕುಮೆ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.