ಕೋಲ್ಕತ್ತಾ, ಜು 23 (DaijiworldNews/DB): ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಸಹಚರ ಅರ್ಪಿತಾ ಮುಖರ್ಜಿ ಮನೆಯಿಂದ ಜಾರಿ ನಿರ್ದೇಶನಾಲಯ ಬರೋಬ್ಬರಿ 20 ಕೋಟಿ ರೂ. ನಗದು ವಶಪಡಿಸಿಕೊಂಡ ಬಳಿಕ ಬಿಜೆಪಿ ಮುಖಂಡರೋರ್ವರು ಇದು ಕೇವಲ ಟ್ರೈಲರ್, ಪಿಕ್ಚರ್ ಇನ್ನೂ ಬಾಕಿ ಇದೆ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ಯಾವುದೇ ವ್ಯಕ್ತಿಯು ಅಪರಾಧ ಎಸಗಿದ ಆರೋಪ ಇದ್ದಲ್ಲಿ ಅದನ್ನು ಕಾನೂನಾತ್ಮಕವಾಗಿಯೇ ಬಗೆಹರಿಸಬೇಕಾಗುತ್ತದೆ. ಇದು ಕೇವಲ ಟ್ರೈಲರ್ ಅಷ್ಟೇ. ಪಿಕ್ಚರ್ ಇನ್ನೂ ಬಾಕಿ ಇದೆ (ಯೆಹ್ ತೋಹ್ ಬಾಸ್ ಟ್ರೈಲರ್, ಪಿಕ್ಚರ್ ಅಭೀ ಬಾಕಈ ಹೈ) ಎಂದು ಬರೆದುಕೊಂಡಿದ್ದಾರೆ.
ಆಪಾದಿತ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅರ್ಪಿತಾ ಮುಖರ್ಜಿ ಮನೆ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ 20 ಕೋಟಿ ರೂ. ನಗರು ಮತ್ತು 20ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊತ್ತವು ಎಸ್ಎಸ್ಸಿ ಹಗರಣ ಅಪರಾಧದ ಆದಾಯ ಎಂಬ ಶಂಕೆಯೂ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ಮೊಬೈಲ್ ಫೋನ್ ಬಳಕೆಯ ಉದ್ದೇಶವೇನು ಎಂಬುದನ್ನೂ ಪತ್ತೆ ಹಚ್ಚಲಾಗುತ್ತಿದೆ.
ಸಚಿವ ಪಾರ್ಥ ಚಟರ್ಜಿ, ಶಿಕ್ಷಣ ಖಾತೆ ರಾಜ್ಯ ಸಚಿವ ಪರೇಶ್ ಸಿ. ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಮತ್ತು ಇತರರ ಮನೆ ಮೇಲೆ ಕೂಡಾ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ ನಡೆದಿದೆ. ಪಾರ್ಥ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ವೇಳೆ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿ ಮಾಡಿರುವ ಆರೋಪ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.