ಮುಂಬೈ, ಜು 23 (DaijiworldNews/DB): ಮುಂಬೈ ಪೊಲೀಸ್ ಆಯುಕ್ತರ ಭೇಟಿಗಾಗಿ ಕ್ರಾಫರ್ಡ್ ಮಾರ್ಕೆಟ್ ಎದುರಿಗಿರುವ ಮುಂಬೈ ಪೊಲೀಸ್ ಮುಖ್ಯ ಕಚೇರಿಗೆ ಆಗಮಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಪೊಲೀಸರು ಸೆಲ್ಫಿಗೆ ಮುಗಿಬಿದ್ದ ಪ್ರಸಂಗ ಶುಕ್ರವಾರ ನಡೆಯಿತು.
ಸಂಜೆ 4ರ ಸುಮಾರಿಗೆ ಮುಂಬೈ ಪೊಲೀಸ್ ಕಮೀಷನರ್ ವಿವೇಕ್ ಪಾನ್ಸಲ್ಕರ್ ಅವರನ್ನು ಭೇಟಿಯಾದ ಸಲ್ಮಾನ್ ಬಳಿಕ ಸಹಾಯಕ ಕಮಿಷನರ್ ವಿಶ್ವಾಸ್ ನಾಂಗ್ರೆ ಪಾಟೀಲ್ ಅವರನ್ನೂ ಭೇಟಿಯಾದರು. ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲ್ಮಾನ್ ಖಾನ್, ಇದೊಂದು ಸೌಜನ್ಯದ ಭೇಟಿಯಾಗಿದ್ದು, ಯಾವುದೇ ವಿಶೇಷವಿಲ್ಲ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ, ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್ನಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸಲ್ಮಾನ್ ಖಾನ್ ಆಯುಕ್ತರು ಮತ್ತು ಸಹಾಯಕ ಆಯುಕ್ತರನ್ನು ಭೇಟಿಯಾಗಿ ಹೊರ ಬಂದ ಬಳಿಕ ಪೊಲೀಸ್ ಸಿಬಂದಿ ನಟನೊಂದಿಗೆ ಸೆಲ್ಫೀ ತೆಗೆದುಕೊಂಡರು.