ನವದೆಹಲಿ, ಜು 23 (DaijiworldNews/MS): ರಾಷ್ಟ್ರ ಲಾಂಛನದ ವಿವಾದ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸೆಂಟ್ರಲ್ ವಿಸ್ತಾ ವ್ಯಾಪ್ತಿಯ ನೂತನ ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ ಮಾದರಿಯು ಭಾರತದ ರಾಷ್ಟ್ರ ಲಾಂಛನ (ಅಸಮರ್ಪಕ ಬಳಕೆಯ ವಿರುದ್ಧದ ನಿಷೇಧ) ಕಾಯಿದೆ, 2005ರ ಉಲ್ಲಂಘನೆಯಾಗಿದೆ ಎಂದು ಇಬ್ಬರು ವಕೀಲರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಅನಾವರಣ ಮಾಡಿರುವ ಲಾಂಛನದಲ್ಲಿರುವ ಸಿಂಹಗಳು ಬಾಯ್ದೆರದು ಕೋರೆಹಲ್ಲುಗಳನ್ನು ಪ್ರದರ್ಶಿಸುವ ಮೂಲಕ "ಭೀತಿಹುಟ್ಟಿಸುವಂತೆಯೂ, ಆಕ್ರಮಣಕಾರಿಯಾಗಿಯೂ" ಇದ್ದು, ಇದು ಸಾರನಾಥ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿರುವ "ಸೌಮ್ಯ ಹಾಗೂ ಗಾಂಭೀರ್ಯ"ದ ರಾಷ್ಟ್ರಲಾಂಛನಕ್ಕೆ ವ್ಯತಿರಿಕ್ತವಾಗಿದೆ ವಕೀಲರಾದ ಅಲ್ದನೀಶ್ ರೈನ್ ಮತ್ತು ರಮೇಶ್ ಕುಮಾರ್ ಮಿಶ್ರಾ ಎಂಬವರು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಲಾಂಛನವು ಭಾರತ ಗಣರಾಜ್ಯದ ಹೆಗ್ಗುರುತಾಗಿದ್ದು ಇದು ಪ್ರತಿ ಭಾರತೀಯರಿಗೂ ಸೇರಿದ್ದಾಗಿದೆ. ಆದರೆ ಅದನ್ನು ತಿರುಚುವ ಮೂಲಕ ನಾಗರಿಕರ ರಾಷ್ಟ್ರೀಯ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ಮನವಿಯಲ್ಲಿ ದೂರಲಾಗಿದೆ
ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ನೂತನ ಸಂಸತ್ ಭವನದ ಮೇಲೆ ಈ ಲಾಂಛನವನ್ನು ಅನಾವರಣ ಮಾಡಿದ್ದರು. ಲಾಂಛನವನ್ನು ತಿರುಚಿರುವ ಬಗ್ಗೆ ವಿಪಕ್ಷಗಳು ಗಂಭೀರ ಆಪಾದನೆಯನ್ನು ಮಾಡಿವೆ. ಆದರೆ, ಕೇಂದ್ರ ಸರ್ಕಾರವು ವ್ಯಾಪಕ ಸಂಶೋಧನೆ ಮತ್ತು ಪ್ರಕ್ರಿಯಾ ವಿಧಾನಗಳ ನಂತರವೇ ಈ ಲಾಂಛನವನ್ನು ರೂಪಿಸಿರುವುದಾಗಿ ಹೇಳಿದೆ.