ನವದೆಹಲಿ, ಜು 23 (DaijiworldNews/MS): ದೆಹಲಿ ರೈಲ್ವೆ ನಿಲ್ದಾಣದಲ್ಲಿ 30 ವರ್ಷದ ಮಹಿಳೆ ಮೇಲೆ ಅಲ್ಲಿನ ಸಿಬ್ಬಂದಿಯೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದೊಳಗಿನ ಎಲೆಕ್ಟ್ರಿಕಲ್ ನಿರ್ವಹಣಾ ಸಿಬ್ಬಂದಿ ಕೊಠಡಿಯಲ್ಲಿ ಇಬ್ಬರು ರೈಲ್ವೆ ಉದ್ಯೋಗಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇಬ್ಬರು ವ್ಯಕ್ತಿಗಳು ಕೊಠಡಿಯ ಹೊರಗಿನಿಂದ ಕಾವಲು ಕಾಯುವ ಮೂಲಕ ಅತ್ಯಾಚಾರ ಯಾರ ಗಮನಕ್ಕೂ ಬಾರದ ರೀತಿ ಎಚ್ಚರಿಕೆ ವಹಿಸಿದ್ದಾರೆ.
ಪ್ರಕರಣದ ನಾಲ್ವರು ಆರೋಪಿಗಳು ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರೈಲ್ವೆ ನೌಕರರಾಗಿದ್ದಾರೆ.
ಆರೋಪಿಗಳನ್ನು ಸತೀಶ್ ಕುಮಾರ್ (35), ವಿನೋದ್ ಕುಮಾರ್ (38), ಮಂಗಲ್ ಚಂದ್ ಮೀನಾ (33) ಮತ್ತು ಜಗದೀಶ್ ಚಂದ್ (37) ಎಂದು ಗುರುತಿಸಲಾಗಿದೆ. ಅಪರಾಧ ನಡೆದ ಎರಡು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.