ದಾವಣಗೆರೆ, ಜು 22 (DaijiworldNews/SM): ಕಮಿಷನ್ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ದಿಟ್ಟತನ ಪ್ರದರ್ಶಿಸಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ನಾನೇನಾದರೂ ಒಂದೇ ಒಂದು ರೂಪಾಯಿ ಕಮಿಷನ್ ಕೇಳಿದ್ದೆ ಎಂಬುದನ್ನು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಶುಕ್ರವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಶೇ.40 ಕಮಿಷನ್ ನೀಡಬೇಕೆಂದು ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷರು ನೇರವಾಗಿ ಪ್ರಧಾನಿ ಅವರಿಗೇ ಪತ್ರ ಬರೆದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತನಿಖೆ ನಡೆಸಿಲ್ಲ. ನಾನು 5 ವರ್ಷ ಮುಖ್ಯಮಂತ್ರಿ, 12 ವರ್ಷ ಹಣಕಾಸು ಸಚಿವನಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ರೂಪಾಯಿ ಕಮಿಷನ್ ಕೇಳಿದ್ದೆ ಎಂಬುದನ್ನು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ಚಿಟ್ ನೀಡಲಾಗಿದೆ. ಮೊದಲೇ ಈಶ್ವರಪ್ಪ ಅವರಿಗೆ ಕ್ಲೀನ್ಚಿಟ್ ನೀಡಲಾಗುತ್ತದೆ ಎಂಬುದು ಗೊತ್ತಿತ್ತು. ವಿಚಾರಣೆ ನಡೆಯುತ್ತಿದ್ದಾಗಲೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಈಶ್ವರಪ್ಪ ಅವರಿಗೆ ಕ್ಲೀನ್ಚಿಟ್ ನೀಡಿದ್ದರು. ಸರ್ಕಾರ ಕೂಡಲೇ ಬಿ ರಿಪೋರ್ಟ್ ರದ್ದುಪಡಿಸಿ, ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದರು.