ನವದೆಹಲಿ, ಜು 22 (DaijiworldNews/SM): ಅಕ್ರಮಗಳ ವಿರುದ್ಧ ಇಡಿ ಡ್ರಿಲ್ ಮುಂದುವರೆಸಿದ್ದು, ಪರಾರಿಯಾಗಿದ್ದ ನೀರವ್ ಮೋದಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ.
ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ಕಂಪನಿಗಳ 253.62 ಕೋಟಿ ರೂಪಾಯಿ ಮೌಲ್ಯದ ರತ್ನಗಳು, ಆಭರಣಗಳು ಮತ್ತು ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತಿಳಿಸಿದೆ. ಹಾಂಗ್ ಕಾಂಗ್ನಲ್ಲಿ ಜಪ್ತಿ ಮಾಡಲಾದ ಈ ಎಲ್ಲಾ ಚರ ಆಸ್ತಿಗಳಿವೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ಬಹಿರಂಗಗೊಳಿಸಿದೆ.
ಹಾಂಗ್ ಕಾಂಗ್ನಲ್ಲಿರುವ ನೀರವ್ ಮೋದಿ ಸಮೂಹದ ಕಂಪನಿಗಳ ಕೆಲವು ಆಸ್ತಿಗಳು ಖಾಸಗಿ ದಾಸ್ತಾನುಗಳಲ್ಲಿವೆ. ಅವು ರತ್ನಗಳು ಮತ್ತು ಆಭರಣಗಳ ರೂಪದಲ್ಲಿದ್ದು, ಅವುಗಳನ್ನು ಮತ್ತು ಖಾತೆಗಳಲ್ಲಿನ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿದೆ.
50 ವರ್ಷದ ನೀರವ್ ಮೋದಿ ಪ್ರಸ್ತುತ ಯುಕೆ ಜೈಲಿನಲ್ಲಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.