ಕೋಲಾರ, ಜು 22 (DaijiworldNews/DB): ಕಾಂಗ್ರೆಸ್ನಿಂದಾಗಿ ನಾವು ಸಾಕಷ್ಟು ಫಲಾನುಭವಿಗಳಾಗಿದ್ದು, ಉತ್ತಮ ಸ್ಥಾನಕ್ಕೇರಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದೇವೆ ಎಂಬರ್ಥದಲ್ಲಿ ನಾನು ಮಾತನಾಡಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೋಲಾರದಲ್ಲಿ ನಡೆದ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕುಟುಂಬದಿಂದ ಬಂದ ನಾನು ಸ್ಪೀಕರ್, ಮಂತ್ರಿಯಾಗುವವರೆಗೂ ಬೆಳೆದಿದ್ದೇನೆ. ಸಾಕಷ್ಟು ಮಂದಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಉತ್ತಮ ಸ್ಥಾನಕ್ಕೇರಿದ್ದಾರೆ. ಇದಕ್ಕೆ ಕಾಂಗ್ರೆಸ್, ಇಂದಿರಾ, ಸೋನಿಯಾ ಗಾಂಧಿಯವರು ಕಾರಣವಾಗಿದ್ದು, ಅವರ ಋಣ ತೀರಿಸಬೇಕು ಎಂದು ಹೇಳಿದ್ದೆ. ಆದರೆ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಆರೋಪಗಳನ್ನು ಹೊರಿಸಲಾಗಿದೆ ಎಂದು ತಿಳಿಸಿದರು.
ನನ್ನನ್ನು ಹಲವು ನಾಯಕರು ನಾಯಿ, ನರಿ, ಶಕುನಿ, ದುರ್ಯೋಧನ, ಉತ್ತರಕುಮಾರ ಮುಂತಾದ ಬಿರುದು ನೀಡಿ ಕರೆದಿದ್ದಾರೆ. ಅವರಿಗೆಲ್ಲ ನನ್ನ ದೀರ್ಘದಂಡ ಪ್ರಣಾಮ. ಇನ್ನೂ ಬಿರುದುಗಳನ್ನು ನೀಡಿದರೆ ಸಂತೋಷ ಎಂದರು.