ನವದೆಹಲಿ, ಜು 22(DaijiworldNews/DB): ಮನೀಶ್ ಸಿಸೋಡಿಯಾ ವಿರುದ್ದದ ಭ್ರಷ್ಟಾಚಾರ ಆರೋಪಗಳು ಆಧಾರರಹಿತವಾಗಿವೆ. ಸುಳ್ಳು ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರು ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಕೇಜ್ರೀವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಸಿಸೋಡಿಯಾ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸುಳ್ಳು ಪ್ರಕರಣದ ಮೂಲಕ ಆರೋಪ ಹೊರಿಸುವ ಪ್ರಯತ್ನ ನಡೆಯುತ್ತಿದ್ದು, ಅವರನ್ನು ಬಂಧಿಸುತ್ತಾರೆ ಎಂಬುದೂ ನಮಗೆ ಗೊತ್ತಿದೆ ಎಂದರು.
ಎರಡು ದಶಕಗಳಿಂದ ಸಿಸೋಡಿಯಾ ನನಗೆ ಪರಿಚಯ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ತಿಳಿದಿದೆ. ಕಳಪೆ ಗುಣಮಟ್ಟದಲ್ಲಿದ್ದ ದೆಹಲಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಅವರ ಶ್ರಮ ದೊಡ್ಡದು ಎಂದು ಅವರು ತಿಳಿಸಿದರು.
ಜೈಲು, ಕುಣಿಕೆಗಳ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ಸಾಕಷ್ಟು ಸುಳ್ಳು ಪ್ರಕರಣಗಳನ್ನು ನಮ್ಮ ವಿರುದ್ದ ಸೃಷ್ಟಿಸುವುದು ಪಕ್ಕಾ ಎಂಬುದೂ ತಿಳಿದಿದೆ. ಪಂಜಾಬ್ ಗೆಲುವಿನ ಬಳಿಕ ಆಮ್ ಆದ್ಮಿ ಪಕ್ಷದ ಸಾಮರ್ಥ್ಯವೂ ಹೆಚ್ಚಿದೆ. ಇದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಆದರೆ ನಮ್ಮ ಬೆಳವಣಿಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಜ್ರೀವಾಲ್ ಹೇಳಿದರು.