ನವದೆಹಲಿ, ಜು 22(DaijiworldNews/DB): ಆಸ್ಪತ್ರೆಯಲ್ಲಿ ದಾಖಲಾತಿ ನಿರಾಕರಿಸಿದ್ದರಿಂದ ರಸ್ತೆಯಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ತುರ್ತು ವಿಭಾಗದ ಹೊರಭಾಗದಲ್ಲಿ ನಡೆದಿದೆ.
30 ವರ್ಷದ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ಬಂದರೂ ಆಸ್ಪತ್ರೆಯವರು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಸೋಮವಾರ ರಾತ್ರಿಯಿಡೀ ಮಹಿಳೆ ಮತ್ತು ಆಕೆಯ ಕುಟುಂಬಿಕರು ತುರ್ತು ವಿಭಾಗದ ಹೊರ ಭಾಗದಲ್ಲೇ ಕಳೆದರು. ಹೆರಿಗೆ ನೋವಿನಿಂದ ಮಹಿಳೆ ಒದ್ದಾಡುತ್ತಿದ್ದರೂ ಆಸ್ಪತ್ರೆಯವರು ಒಳಗೆ ದಾಖಲು ಮಾಡಿಕೊಳ್ಳಲಿಲ್ಲ. ಕೊನೆಗೆ ಆಸ್ಪತ್ರೆ ಆವರಣದಲ್ಲೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಮಹಿಳೆ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ.
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಚಾರಣೆಯನ್ನು ಕೈಗೊಳ್ಳಲಾಗಿದೆ. ಶೀಘ್ರ ಪ್ರಾಥಮಿಕ ವರದಿ ಸಲ್ಲಿಕೆ ಮಾಡಲಾಗುವುದು. ದೆಹಲಿ ಮಹಿಳಾ ಆಯೋಗವು ಆಸ್ಪತ್ರೆಗೆ ನೊಟೀಸ್ ಜಾರಿ ಮಾಡಿದ್ದು, ಜುಲೈ25 ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.