ಹೈದರಾಬಾದ್, ಜು 22 (DaijiworldNews/HR): ಕಳೆದ ನಾಲ್ಕು ವರ್ಷಗಳಲ್ಲಿ 13 ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಅಡಪ ಶಿವಶಂಕರ್ ಬಾಬು ಎಂಬಾತ ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಲಕ್ಷಾಂತರ ರೂಪಾಯಿ ಸಂಪಾದಿಸುತ್ತೇನೆ ಎಂದು ಹೇಳಿ ಶ್ರೀಮಂತ ಕುಟುಂಬಗಳಿಂದ ವಿಚ್ಛೇದಿತ ಮಹಿಳೆಯರಿಗಾಗಿ ಹಲವಾರು ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳನ್ನು ಹುಡುಕಿ, ಅವರನ್ನೇ ಮದುವೆಯಾಗಿ, ನಂತರ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ.
ಈ ಕುರಿತು ಮಾದಾಪುರ ಎಸಿಪಿ ರಘುನಂದನ್ ರಾವ್ ಮಾಹಿತಿ ನೀಡಿದ್ದು, ತನ್ನ ತಂದೆ-ತಾಯಿ ಬಹಳ ಹಿಂದೆಯೇ ತೀರಿಕೊಂಡಿದ್ದಾರೆ ಎಂದು ಹೇಳಿಕೊಂಡು ಮಹಿಳೆಯರಿಗೆ ನಕಲಿ ವಿಚ್ಛೇದನ ಪತ್ರಗಳನ್ನು ತೋರಿಸುತ್ತದ್ದ. ಆದರೆ ಅವರ ತಂದೆ-ತಾಯಿ ಬದುಕಿದ್ದು ಅವರ ಊರಿನಲ್ಲಿಯೇ ಇದ್ದಾರೆ. ವ್ಯಾಪಾರದಲ್ಲಿ ಹಣವನ್ನು ಕಳೆದುಕೊಂಡು ಭಾರೀ ನಷ್ಟವನ್ನು ಅನುಭವಿಸಿದ ನಂತರ ಅವರು 2018 ರಲ್ಲಿ ಮಹಿಳೆಯರನ್ನು ವಂಚಿಸಲು ಪ್ರಾರಂಭಿಸಿದ್ದು, ಮದುವೆ ಸಂದರ್ಭದಲ್ಲಿ ನಗದು, ಚಿನ್ನಾಭರಣ ತೆಗೆದುಕೊಂಡು ಬೆಲೆಬಾಳುವ ವಸ್ತುಗಳನ್ನು ಅಡಮಾನವಿಟ್ಟು ಹಣ ಪಡೆದುಕೊಳ್ಳುತ್ತಿದ್ದನು ಎಂದು ತಿಳಿಸಿದ್ದಾರೆ.
ಆತ ಇದೇ ರೀತಿ ಮಹಿಳೆಯರಿಗೆ ಸುಳ್ಳು ಹೇಳಿಕೊಂಡು ಒಟ್ಟು 13 ಮಹಿಳೆಯರಿಗೆ ಈ ಭೂಪ ವಂಚಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.