ಜಾಲೌನ್(ಉತ್ತರ ಪ್ರದೇಶ), ಜು 22(DaijiworldNews/DB): ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಚಿರಿಯಾ ಸಲೆಂಪುರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ 296 ಕಿ.ಮೀ. ಉದ್ದದ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ರಸ್ತೆಯ ಒಂದು ಭಾಗದಲ್ಲಿ ಮಳೆಗೆ ಗುಂಡಿ ಬಿದ್ದಿರುವುದಕ್ಕೆ ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
15 ಸಾವಿರ ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ಎಕ್ಸ್ಪ್ರೆಸ್ವೇ ಇದಾಗಿದೆ. ಆದರೆ ಐದು ದಿನಗಳ ಮಳೆಯನ್ನು ಎದುರಿಸುವಷ್ಟು ಗಟ್ಟಿಯಾಗಿಲ್ಲ ಎಂದಾದರೆ ಅದರ ಗುಣಮಟ್ಟದ ಬಗ್ಗೆ ಪ್ರಶ್ನೆ ಉದ್ಬವಿಸುತ್ತದೆ. ಯೋಜನೆಯ ಮುಖ್ಯಸ್ಥ, ಸಂಬಂಧಪಟ್ಟ ಇಂಜಿನಿಯರ್, ಕಾಮಗಾರಿ ನಡೆಸಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿ ಅವರು ಒತ್ತಾಯಿಸಿದ್ದಾರೆ.
ಈ ರಸ್ತೆಯ ಒಂದು ಭಾಗದಲ್ಲಿ ಕನಿಷ್ಠ ಒಂದೂವರೆ ಅಡಿಗಳಷ್ಟು ಆಳದ ಗುಂಡಿ ಬಿದ್ದಿದೆ. ಹೀಗಾಗಿ ಗುಂಡಿಯನ್ನು ತುರ್ತಾಗಿ ಮುಚ್ಚಿ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಯುಪಿ ಎಕ್ಸ್ಪ್ರೆಸ್ವೇ ಇಂಡಸ್ಟ್ರಿಯಲ್ ಅಥಾರಿಟಿಯ ವಕ್ತಾರ ದುರ್ಗೇಶ್ ಉಪಾಧ್ಯಾಯ ಹೇಳಿದ್ದಾರೆ.
ಇನ್ನು ಈ ರಸ್ತೆಯಲ್ಲಿ ಆಗಿರುವ ಅವ್ಯವಸ್ಥೆಯ ಬಗ್ಗೆ ಪ್ರತಿಪಕ್ಷಗಳೂ ಟೀಕೆ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿಯವರು ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯನ್ನು ಉದ್ಘಾಟಿಸಿದ ಒಂದೇ ವಾರದಲ್ಲಿ ಹೊಂಡಗಳು ಕಾಣಿಸಿಕೊಂಡಿರುವುದು ಬಿಜೆಪಿಯ ಅಭಿವೃದ್ದಿ ಕೆಲಸಗಳ ಕಳಪೆ ಕಾಮಗಾರಿಗೆ ತಾಜಾ ಉದಾಹರಣ ಎಂದು ಎಸ್ಪಿ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಕೂಡಾ ರಸ್ತೆ ದುರವಸ್ಥೆಯನ್ನು ಟೀಕಿಸಿದ್ದಾರೆ.