ಶಿವಮೊಗ್ಗ, ಜು 22(DaijiworldNews/DB): ತಾವು ಹಲವು ವರ್ಷಗಳಿಂದ ಸ್ಪರ್ಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುತ್ರ ಬಿ.ವೈ. ವಿಜಯೇಂದ್ರರಿಗಾಗಿ ಬಿಟ್ಟುಕೊಡುತ್ತಿದ್ದಾರೆ. ಇದನ್ನು ಖುದ್ದು ಯಡಿಯೂರಪ್ಪ ಅವರೇ ಇಂದು ಘೋಷಿಸಿದ್ದಾರೆ.
ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಅಂಜನಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರವನ್ನು ನಾನು ಬಿಟ್ಟುಕೊಡುತ್ತಿದ್ದೇನೆ. ಇಲ್ಲಿ ನನ್ನ ಬದಲಾಗಿ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಮೈಸೂರು ಭಾಗದಿಂದ ಸ್ಪರ್ಧಿಸಲು ವಿಜಯೇಂದ್ರಗೆ ಒತ್ತಡವಿದೆ. ಆದರೆ ಶಿಕಾರಿಪುರದಲ್ಲಿ ಸ್ಥಾನ ತೆರವಾಗುವುದರಿಂದ ಅವರು ಶಿಕಾರಿಪುರದಲ್ಲೇ ಸ್ಪರ್ಧಿಸಲಿದ್ದಾರೆ ಎಂದರು.
ಶಿಕಾರಿಪುರದ ಜನರು ನನಗಿಂತಲೂ ದೊಡ್ಡ ಮತಗಳ ಅಂತರದಿಂದ ವಿಜಯೇಂದ್ರರನ್ನು ಗೆಲ್ಲಿಸಬೇಕು ಎಂದು ಇದೇ ವೇಳೆ ಬಿಎಸ್ವೈ ಮನವಿ ಮಾಡಿದರು.