ಬೆಂಗಳೂರು, ಜು 22(DaijiworldNews/DB): ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ನವವಿವಾಹಿತ ಸಾವನ್ನಪ್ಪಿದ ಘಟನೆ ನಾಗರಬಾವಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಮುಕೇಶ್ (28) ಮೃತಪಟ್ಟವರು. ತಿರುವಣ್ಣಾಮಲೈನಲ್ಲಿರುವ ತಾಯಿ ಮತ್ತು ಅಜ್ಜಿಯನ್ನು ನೋಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಮುಕೇಶ್ ಅವರನ್ನು ಮನೆಗೆ ಕರೆದೊಯ್ಯಲು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಡೇವಿಡ್ ಎಂಬಾತ ಬೈಕ್ ತಂದಿದ್ದು, ಬೈಕ್ನಲ್ಲಿ ಮುಕೇಶ್ ಹಿಂಬದಿಯಲ್ಲಿ ಕುಳಿತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬೃಹತ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ನಾಗರಬಾವಿ ನಮ್ಮೂರ ದಿಣ್ಣೆ ಬಳಿ ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದೆ. ಈ ವೇಳೆ ಲಾರಿಯಲ್ಲಿದ್ದ ದಿಮ್ಮಿಗಳು ಎರಡು ಬೈಕ್ಗಳ ಮೇಲೆ ಬಿದ್ದಿದ್ದು, ಒಂದು ಬೈಕ್ನಲ್ಲಿ ಹಿಂಬದಿ ಸವಾರರಾಗಿದ್ದ ಮುಕೇಶ್ ಮೇಲೆ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಡೇವಿಡ್ಗೂ ಗಂಭೀರ ಗಾಯಗಳಾಗಿದೆ. ಮತ್ತೊಂದು ಬೈಕ್ ಸವಾರ ಶಿವು ಕೂಡಾ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಏಳು ತಿಂಗಳ ಹಿಂದಷ್ಟೇ ಮುಕೇಶ್ ಮದುವೆಯಾಗಿದ್ದು, ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ಮುಕೇಶ್ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.