ಬೆಂಗಳೂರು, ಜು 22 (DaijiworldNews/HR): ಕಾಂಗ್ರೆಸ್ನವರು ಏನು ಮಾಡಿದ್ದಾರೆ ಅನ್ನೋದನ್ನು ರಮೇಶ್ ಕುಮಾರ್ ಸತ್ಯ ಬಾಯಿಬಿಟ್ಟಿದ್ದಾರೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆ ವಿರೋಧಿಸಿದ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಗಾಂಧಿ ಕುಟುಂಬ ಹೆಸರಲ್ಲಿ 3-4 ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡ ನಾವು ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ ಎಂದಿದ್ದಾರೆ.
ಇನ್ನು ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ. ಪಕ್ಷ ಕುಟುಂಬ ಇದ್ದಂತೆ, ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ಮನಸ್ತಾಪಗಳೆಲ್ಲವು ಸಹಜ. ಅವೆಲ್ಲವುಗಳನ್ನು ಬದಿಗೊತ್ತಿ ನಾವೆಲ್ಲರು ಒಂದಾಗಬೇಕು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ, ರಮೇಶ್ ಕುಮಾರ್ ಸತ್ಯ ಬಾಯಿಬಿಟ್ಟಿದ್ದಾರೆ. ಏನು ಮಾಡಿದ್ದೇವೆ ಎಂಬುದನ್ನು ಅವರೇ ಹೇಳಿದ್ದಾರೆ. ರಮೇಶ್ ಕುಮಾರ್ ಮಾತಿನಲ್ಲಿ ತೂಕವಿದೆ ಎಂದಿದ್ದಾರೆ.