ಬೆಂಗಳೂರು, ಜು 22(DaijiworldNews/DB): ರಮೇಶ್ಕುಮಾರ್ ಅವರು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್ನ ಆರು ದಶಕಗಳ ನಿಜ ಬಣ್ಣವನ್ನು ಹೊರಗೆ ಹಾಕಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಯಾವಾಗಲೂ ಸತ್ಯ ಹೇಳುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಇಡಿ ವಿಚಾರಣೆಗೆ ರಮೇಶ್ಕುಮಾರ್ ಸಾಕ್ಷಿ ನೀಡಿದ್ದಾರೆ. ನಮ್ಮ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ನವರ ಆಸ್ತಿ ವಿಚಾರವನ್ನು ಅವರ ಪಕ್ಷದವರೇ ಈಗ ಬಾಯ್ಬಿಟ್ಟಿದ್ದಾರೆ. ಮೂರ್ನಾಲ್ಕು ತಲೆಮಾರು ಲೆಕ್ಕಾ ಹಾಕಿದ್ರೆ 160% ಕಮಿಷನ್ ಹೊಡೆದಂತಾಗುತ್ತದೆ. 70 ವರ್ಷ ದೇಶವನ್ನು ಲೂಟಿ ಮಾಡಿರುವುದೇ ಅವರ ಸಾಧನೆ ಎಂದು ಆಪಾದಿಸಿದರು.
ರಮೇಶ್ಕುಮಾರ್ ಹೇಳಿಕೆ ವಿಚಾರವಾಗಿ ಬಿಜೆಪಿಯೊಂದಿಗೆ ಚರ್ಚೆಗೆ ಸಿದ್ದ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ಮೊದಲು ಅವರು ರಮೇಶ್ಕುಮಾರ್ ಜೊತೆ ಕುಳಿತು ಚರ್ಚಿಸಲಿ. ಆಮೇಲೆ ನಮ್ಮೊಂದಿಗೆ ಚರ್ಚೆಗೆ ಬರಲಿ ಎಂದರು.