ಬೆಂಗಳೂರು, ಜು 22(DaijiworldNews/DB): ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ, ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದೆ.
ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು. ಇನ್ನೊಮ್ಮೆ ಬಂಡೆ ಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು ಎಂದು ಬಿಜೆಪಿ ಹೇಳಿದೆ.
ಸಚಿವರಾಗಿದ್ದ ಕೆಜೆ ಜಾರ್ಜ್ ಅವರ ಸ್ಟೀಲ್ ಬ್ರಿಡ್ಜ್ ಎಷ್ಟೋ ತಲೆಮಾರುಗಳನ್ನು ಹಾದು ಹೋಗುತ್ತಿತ್ತೇನೋ! ಅಭಿವೃದ್ಧಿ ಹೆಸರಿನಲ್ಲಿ ತಮ್ಮ ತಲೆ ತಲೆಮಾರುಗಳನ್ನು ಜಾರ್ಜ್ ಸಾಹೇಬರು ಅಭಿವೃದ್ಧಿ ಮಾಡಿಕೊಂಡರು ಎಂದು ಬಿಜೆಪಿ ಲೇವಡಿ ಮಾಡಿದೆ.
ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರು ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದಾರೆ ಎಂದಾದರೆ ಆ ನಕಲಿ ಗಾಂಧಿ ಕುಟುಂಬದವರು ಎಷ್ಟು ಮಾಡಿರಬಹುದು? ಇದರ ಲೆಕ್ಕ ಕೇಳಲು ಇಡಿ ಅಧಿಕಾರಿಗಳು ಕರೆದರೆ, ನಕಲಿ ಗಾಂಧಿ ಕುಟುಂಬದ ಕಾರಣದಿಂದ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಕೂಡಿಟ್ಟವರು ಋಣ ತೀರಿಸಲು ಬೀದಿಗಿಳಿಯಲೇ ಬೇಕಲ್ಲವೇ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಎಂಬ ಪ್ರಶ್ನೆಗೆ ರಮೇಶ್ ಕುಮಾರ್ ಅವರ ಭಾಷಣದಿಂದ ಉತ್ತರ ದೊರಕಿದೆ. ನೆಹರೂ ಕಾಲದಿಂದ ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಟ್ಟಿರುವುದು ಸ್ಪಷ್ಟ. ಇದು ದೇಶವನ್ನೇ ಮಾರುವಂಥಹ ಅಪರಾಧ! ಎಂದು ಬಿಜೆಪಿ ಆಪಾದಿಸಿದೆ.
ಈ ದೇಶವನ್ನು ನುಂಗಿ ನೀರು ಕುಡಿದ ಕಾಂಗ್ರೆಸಿಗರು ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ರಮೇಶ್ ಕುಮಾರ್ ಹೇಳಿದಂತೆ ತಿನ್ನುವ ಅನ್ನದಲ್ಲಿ ಹುಳು ಬೀಳುತ್ತದೆಯಲ್ಲವೇ? ಕೇವಲ ನಕಲಿ ಗಾಂಧಿ ಕುಟುಂಬದ ಋಣ ತೀರಿಸಿದರೆ ಸಾಕೇ? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಅರ್ಕಾವತಿ ರೀಡು ಅವ್ಯವಹಾರ ನಡೆಯಿತು. ಖುದ್ದು ಅವರೇ ಮುಂದೆ ನಿಂತು ನ್ಯಾಯಾಲಯದ ಆದೇಶ ತಿರುಚಿ ಅಕ್ರಮ ಎಸಗಿದರು. ಈ ನೂರಾರು ಕೋಟಿ ಮೊತ್ತದ ಹಗರಣ ಸಿದ್ದರಾಮಯ್ಯರ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದು ನಿಜವಲ್ವೇ? ಎಂದು ಬಿಜೆಪಿ ಪ್ರಶ್ನೆ ಎಸೆದಿದೆ.