ಹೈದರಾಬಾದ್, ಜು 22(DaijiworldNews/DB): ತನ್ನ ಯೂಟ್ಯೂಬ್ ಚಾನೆಲ್ಗೆ ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಬೇಸರಗೊಂಡು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಟ್ಟಡದ ಐದನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನ ಸೈದಾಬಾದ್ನಲ್ಲಿ ನಡೆದಿದೆ.
ಚಂದ್ರಶೇಖರ್ ಧೀನಾ (22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಗ್ವಾಲಿಯರ್ ಐಐಐಟಿಎಂನಲ್ಲಿ ಎಂಜಿನಿಯರಿಂಗ್ ನಾಲ್ಕನೇ ವರ್ಷವನ್ನು ಪೂರ್ಣಗೊಳಿಸಿದ್ದ ಈತ ರಜೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ. ಮನೆಯಲ್ಲಿರುವಾಗ ನಾಲ್ಕು ವರ್ಷದ ಹಿಂದೆ ಆರಂಭಿಸಿದ್ದ ಸೆಲ್ಫ್ಲೋ ಎಂಬ ಯೂಟ್ಯೂಬ್ ಚಾನೆಲ್ನಲ್ಲೇ ರಾತ್ರಿ 11 ರಿಂದ ಬೆಳಗ್ಗೆ 6 ರವರೆಗೆ ಗೇಮಿಂಗ್ ಆಡುತ್ತಿದ್ದ. ಆದರೆ ಹೆತ್ತವರೊಂದಿಗೆ, ನೆರೆಹೊರೆಯವರೊಂದಿಗೆ ಸಂವಹನ, ಬೆರೆಯುವುದು ಇರಲಿಲ್ಲ. ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಖಿನ್ನತೆಗೆ ಜಾರಿದ್ದು, ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಾನು ಬಾಲ್ಯದಿಂದ ಜೀವನದುದ್ದಕ್ಕೂ ಅನುಭವಿಸಿದ್ದೇನೆ. ಪ್ರಪಂಚದಿಂದ ಬೇರೆಯಾಗುವ ಸಮಯ ಈಗ ಬಂದಿದೆ ಎಂದು ಬರೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.