ಮೈಸೂರು, ಜು 22 (DaijiworldNews/HR): ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿದ್ದೇನೆ. ನನ್ನದೇನೂ ತಪ್ಪಿಲ್ಲದಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಈಗ ಸತ್ಯಕ್ಕೆ ಜಯ ಸಿಕ್ಕಿದೆ, ಆದರೆ ನನ್ನನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾನ್ಯಾವ ತಪ್ಪನ್ನೂ ಮಾಡಿರಲಿಲ್ಲ ಹಾಗಾಗಿ ಆರೋಪ ಮುಕ್ತನಾಗಿ ಬರುತ್ತೇನೆಂದು ಆರಂಭದಲ್ಲೇ ಗೊತ್ತಿತ್ತು. ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದೆ. ಪಕ್ಷಕ್ಕೆ ಆಗಿದ್ದ ಮುಜುಗರವೂ ಈಗ ನಿವಾರಣೆ ಆದಂತಾಗಿದೆ ಎಂದರು.
ಇನ್ನು ಡಿ.ಕೆ. ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಎಂದುಕೊಂಡಿದ್ದೆ. ಆದರೆ, ಅವರು ಜಾತಿವಾದಿಯಾಗಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಕೂಡ ಜಾತಿವಾದಿಯಾಗಿದ್ದಾರೆ. ಇವರಿಬ್ಬರೂ ಸೇರಿ ಕಾಂಗ್ರೆಸ್ಗೆ ಜಾತಿಯ ಕೆಸರು ಅಂಟಿಸಿದ್ದಾರೆ ಎಂದು ಟೀಕಿಸಿದರು.
ನಾಲ್ಕು ತಲೆಮಾರಿಗೆ ಆಗುವಷ್ಟು ಹಣ ಸಂಪಾದಿಸಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಕುಮಾರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.