ನವದೆಹಲಿ, ಜು 21 (DaijiworldNews/DB): ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಎರಡನೇ ಸುತ್ತಿನ ಮತ ಎಣಿಕೆಯಲ್ಲೂ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆ ಕಾಯ್ದುಕೊಂಡಿದ್ದಾರೆ.
10 ರಾಜ್ಯಗಳ ಶಾಸಕರ ಮತಗಳು, ಎಲ್ಲಾ ಸಂಸದರ ಮತಗಳನ್ನು ಎರಡನೆಯ ಹಂತದಲ್ಲಿ ಎಣಿಕೆ ಮಾಡಲಾಗಿದೆ. 1,138 ಶಾಸಕರ ಮತಗಳ ಪೈಕಿ ಮುರ್ಮು 809 ಮತ ಪಡೆದರೆ, ಯಶವಂತ್ ಸಿನ್ಹಾ 329 ಮತ ಪಡೆದುಕೊಂಡಿದ್ದಾರೆ. ಈ ಮತಗಳ ಒಟ್ಟು ಮೌಲ್ಯ 1.49 ಲಕ್ಷವಾಗಿದ್ದು, ಮುರ್ಮು ಅವರಿಗೆ 1.05 ಲಕ್ಷ ಮೌಲ್ಯದ ಮತಗಳು ಹಾಗೂ ಸಿನ್ಹಾ ಅವರಿಗೆ 44,276 ಮೌಲ್ಯದ ಮತಗಳು ಎರಡನೇ ಸುತ್ತಿನಲ್ಲಿ ಬಂದಂತಾಗಿದೆ.
ಮೊದಲ ಹಂತದ ಮತ ಎಣಿಕೆ ಪ್ರಕ್ರಿಯೆಯಲ್ಲಿಯೂ ಮುರ್ಮು ಮುನ್ನಡೆ ಸಾಧಿಸಿದ್ದರು. ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ರಾತ್ರಿ 8ರ ಸುಮಾರಿಗೆ ಮುಗಿಯಲಿದೆ. ಆ ವೇಳೆ ಭಾರತದ 15ನೇ ರಾಷ್ಟ್ರಪತಿ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.