ಕೋಲಾರ, ಜು 21 (DaijiworldNews/DB): ಕಾಂಗ್ರೆಸ್ನ ಭ್ರಷ್ಟಾಚಾರಗಳನ್ನು ರಮೇಶ್ಕುಮಾರ್ ಅವರು ಸೊಗಸಾಗಿ ವರ್ಣಿಸಿದ್ದಾರೆ. ಇನ್ನು ಯಾವ ಮುಖ ಇಟ್ಟುಕೊಂಡು ಅವರು ಜನರ ಬಳಿ ಮತ ಕೇಳಲು ಹೋಗುತ್ತಾರೆ ಎಂದು ಸಚಿವ ಡಾ. ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.
ಗಾಂಧಿ ಕುಟುಂಬದ ಹೆಸರಿನಲ್ಲಿ ಮುಂದಿನ ಎರಡು ಮೂರು ತಲೆಮಾರಿಗೆ ಬೇಕಾದಷ್ಟು ಮಾಡಿಕೊಂಡಿದ್ದೇವೆ ಎಂದು ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಕೆ.ಆರ್. ರಮೇಶ್ಕುಮಾರ್ ಆಡಿದ ಮಾತುಗಳಿಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ರಮೇಶ್ಕುಮಾರ್ ಆಡಿರುವ ಮಾತುಗಳುಳ್ಳ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಆರು ದಶಕಗಳಲ್ಲಿ ಲೂಟ್ ಇಂಡಿಯಾ ಕಾರ್ಯಕ್ರಮ ನಡೆಸಿರುವುದನ್ನು ರಮೇಶ್ಕುಮಾರ್ ಸೊಗಸಾಗಿ ವರ್ಣಿಸಿದ್ದಾರೆ. ಅಂತಹ ಮೇಧಾವಿ ನಾಯಕರಿಗೆ ಅಭಿನಂದನೆ. ಇಷ್ಟು ಪ್ರಾಮಾಣಿಕವಾಗಿ ಭ್ರಷ್ಟಾಚಾರವನ್ನು ನಿಮ್ಮ ಪಕ್ಷದ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆಂದ ಮೇಲೆ ಇನ್ನು ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಕೋಲಾರದ ಕಾಂಗ್ರೆಸ್ ಉತ್ತರ ಕುಮಾರ ಅವರು ಸಿದ್ದರಾಮಯ್ಯರನ್ನು ಕರೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಇದು ಖೆಡ್ಡಕ್ಕೆ ಬೀಳಿಸುವ ಪ್ರಯತ್ನವಾಗಿದೆ. ಅಲ್ಲಿನ ಶಾಸಕರಿಗೆ ಆತಂಕವೂ ಇದೆ ಎಂದರು.