ಸೂರತ್, ಜು 21 (DaijiworldNews/MS): ಈ ವರ್ಷ ಚುನಾವಣೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ತಿಂಗಳಿಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಭರವಸೆ ನೀಡಿದರು.
ಸೂರತ್ನಲ್ಲಿ ನಡೆದ ಟೌನ್ ಹಾಲ್ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ , ರಾಜ್ಯದಲ್ಲಿ ಯಾವುದೇ ಕಡಿತವಿಲ್ಲದೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡಿದರು.
ಜುಲೈ ತಿಂಗಳಲ್ಲಿ ಎರಡನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಜ್ರಿವಾಲ್, ನಾನು ನಿಮಗೆ ಭರವಸೆ ನೀಡುತ್ತೇನೆ. ಇದರಲ್ಲಿ ಯಾವುದೇ ತಪ್ಪು ಕಂಡುಬಂದರೆ ಮುಂದಿನ ಚುನಾವಣೆಯಲ್ಲಿ ಎಎಪಿಗೆ ಮತ ಹಾಕದಿರಲು ನೀವು ಸ್ವತಂತ್ರರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜನರ ಆಕಾಂಕ್ಷೆಗಳನ್ನು ಈಡೇರಿಸಲಾಗುವುದು ಎಂದು ವಾಗ್ದಾನ ನೀಡಿದರು.
ಡಿಸೆಂಬರ್ 31, 2021 ರ ಮೊದಲು ನೀಡಲಾದ ಎಲ್ಲಾ ಬಾಕಿ ಉಳಿದಿರುವ ವಿದ್ಯುತ್ ಬಿಲ್ಗಳನ್ನು ಮನ್ನಾ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.
ಗುಜರಾತ್ನಲ್ಲಿ ಡಿಸೆಂಬರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ದೆಹಲಿ ಹಾಗೂ ಪಂಜಾಬ್ ಬಳಿಕ ಗುಜರಾತ್ ಮೇಲೆ ಎಎಪಿ ದೃಷ್ಟಿ ಹರಿಸಿದೆ.